ಕುಂಬಳೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿಸಿ ಟ್ರಸ್ಟ್) ಕುಂಬಳೆ ವಲಯ, ಮಂಜೇಶ್ವರ ತಾಲೂಕು ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸೂರಂಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ 'ಸ್ವಾಸ್ಥ್ಯ ಸಂಕಲ್ಪ' ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ನಿವೃತ್ತ ಪೋಲೀಸ್ ಅಧಿಕಾರಿ ಸೋಮಯ್ಯ ಅವರು, ಪ್ರಸ್ತುತ ಕಾಲಘಟ್ಟದಲ್ಲಿ ಮಾದಕ ವ್ಯಸನ ದೊಡ್ಡ ಮಾಫಿಯಾವಾಗಿ ಬೆಳೆದು ನಿಂತಿದೆ. ಯುವಜನತೆಯನ್ನು ಬಲಿ ಪಡೆಯುತ್ತಿರುವ ಈ ಸಮಾಜಘಾತಕ ಜಾಲದ ಬಗ್ಗೆ ಪ್ರತಿಯೊಬ್ಬರೂ ಎಚ್ಚರದಿಂದಿರಬೇಕು ಎಂದು ಕಳವಳ ವ್ಯಕ್ತಪಡಿಸಿದರು. ಮುಂದುವರಿದು ಮಾತನಾಡಿದ ಅವರು, ಮಾದಕ ದ್ರವ್ಯ ಸೇವನೆಗೆ ದಾಸರಾಗುವುದು ಎಂದರೆ ಗೆದ್ದಲು ಹಿಡಿದ ಮರದಂತೆ, ಒಳಗಿನಿಂದಲೇ ನಶಿಸಿ ಹೋಗುವುದು ಎಂದು ವಿದ್ಯಾರ್ಥಿಗಳಿಗೆ ವ್ಯಸನದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು.
ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಸುನಿತಾ, ಜನಜಾಗೃತಿ ವೇದಿಕೆ ಕುಂಬಳೆ ವಲಯಾಧ್ಯಕ್ಷ ಮಹೇಶ್ ಪುಣಿಯೂರು, ಪ್ರಗತಿ ಬಂಧು ಸ್ವಸಹಾಯ ಸಂಘದ ವಲಯಾಧ್ಯಕ್ಷೆ ಜಯಂತಿ, ವಲಯ ಮೇಲ್ವಿಚಾರಕ ಅಭಿಷೇಕ್, ಸೇವಾ ಪ್ರತಿನಿಧಿ ಸ್ವರ್ಣಲತಾ, ಶಿಕ್ಷಕ ವೃಂದ ಹಾಗೂ ನೂರಾರು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ, ಮಾದಕ ಮುಕ್ತ ಜೀವನ ನಡೆಸುವ ಪ್ರತಿಜ್ಞೆ ಸ್ವೀಕರಿಸಿದರು.

.jpg)
.jpg)
