HEALTH TIPS

ಭಾರತ, ನೇಪಾಳದಲ್ಲಿ ಘೇಂಡಾಮೃಗ ಬೇಟೆ ಶೂನ್ಯ: ಇದೀಗ, ಆವಾಸಸ್ಥಾನದ್ದೇ ಸಮಸ್ಯೆ

 ಗುವಾಹಟಿ: ಭಾರತ, ನೇಪಾಳ ಹಾಗೂ ಇಂಡೋನೇಷ್ಯಾದಲ್ಲಿ ಘೇಂಡಾಮೃಗ (ಖಡ್ಗಮೃಗ) ಬೇಟೆಗೆ ಸಂಬಂಧಿಸಿದ ಒಂದೇ ಒಂದು ಪ್ರಕರಣ 2025ರಲ್ಲಿ ವರದಿಯಾಗಿಲ್ಲ ಎಂದು ತಿಳಿದುಬಂದಿದೆ. 


ಇಂಟರ್‌ನ್ಯಾಷನಲ್ ರೈನೋ ಫೌಂಡೇಶನ್ (ಐಆರ್‌ಎಫ್‌) ಬಿಡುಗಡೆ ಮಾಡಿರುವ 2026ರ 'ಸ್ಟೇಟ್‌ ಆಫ್‌ ದಿ ರೈನೋಸ್‌' ವರದಿಯಲ್ಲಿ ಈ ಮಾಹಿತಿ ಉಲ್ಲೇಖವಾಗಿದೆ. ಇದರಿಂದಾಗಿ, ಈ ಪ್ರಾಣಿಗಳ ಸಂರಕ್ಷಣೆಗೆ ಸಂಬಂಧಿಸಿದ ಉಪಕ್ರಮಗಳಿಗೆ ಉತ್ತೇಜನ ದೊರೆತಂತಾಗಿದೆಯಾದರೂ, ಮತ್ತೊಂದು ಮುಖ್ಯ ಸಮಸ್ಯೆಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ.

'ಘೇಂಡಾಮೃಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಆದರೆ, ಅವುಗಳ ಆವಾಸಸ್ಥಾನ ಹಾಳಾಗುತ್ತಿದೆ. ಕಾಡಿನಲ್ಲಿ ಬೆಳೆಯುತ್ತಿರುವ ಇತರ ಸಸ್ಯಗಳು ಘೇಂಡಾಮೃಗಗಳ ಪ್ರಮುಖ ಆಹಾರವಾದ ಹುಲ್ಲಿನ ಬೆಳವಣಿಗೆಗೆ ಅಡ್ಡಿಯಾಗಿವೆ. ಇದು, ಭವಿಷ್ಯದಲ್ಲಿ ದೊಡ್ಡ ಸಮಸ್ಯೆ ಸೃಷ್ಟಿಸಬಹುದು' ಎಂದು ಮುನ್ನೆಚ್ಚರಿಕೆ ನೀಡಿದೆ.

ಅಳಿವಿನಂಚಿನಲ್ಲಿರುವ ಈ ಪ್ರಾಣಿಗಳ ಪ್ರಮುಖ ಆವಾಸಸ್ಥಾನವಾಗಿರುವ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಇತರ ಕೆಲವೆಡೆ ಗಣತಿ ನಡೆದಿಲ್ಲವಾದರೂ, ಇವುಗಳ ಸಂಖ್ಯೆ 2025ರಲ್ಲಿ 4,075ಕ್ಕೆ ಏರಿಕೆಯಾಗಿದೆ. 1,300 ಚದರ ಕಿ.ಮೀ. ವ್ಯಾಪ್ತಿಯಲ್ಲಿರುವ ಕಾಜಿರಂಗದಲ್ಲಿ 2022ರಲ್ಲಿ 2,600 ಘೇಂಡಾಮೃಗಗಳಿದ್ದವು. ಆ ವರ್ಷ ಒಂದೇ ಒಂದು ಬೇಟೆ ಪ್ರಕರಣ ವರದಿಯಾಗಿರಲಿಲ್ಲ.

ಅಸ್ಸಾಂನ ಮಾನಸ್‌ ರಾಷ್ಟ್ರೀಯ ಉದ್ಯಾನವನದಲ್ಲಿ ಈಗ 40 - 50 ಘೇಂಡಾಮೃಗಗಳಿವೆ. ಹೆಚ್ಚಿನವುಗಳನ್ನು ಬೇರೆ ಕಡೆಯಿಂದ ತಂದು ಬಿಡಲಾಗಿದೆ. ಉತ್ತರ ಪ್ರದೇಶದ ದೂಧ್ವಾ ಮತ್ತು ಪಶ್ಚಿಮ ಬಂಗಾಳದ ಜಲ್ದಾಪಾರಾ, ಗೊರುಮಾರಾ ಉದ್ಯಾನಗಳಲ್ಲಿಯೂ ಅಸ್ಸಾಂನಿಂದ ತಂದ ಖಡ್ಗಮೃಗಗಳ ಸಂಖ್ಯೆ ಹೆಚ್ಚಾಗಿದೆ.

'2010ರ ಮಧ್ಯದಲ್ಲಿ ಅಸ್ಸಾಂನಲ್ಲಿ 30ಕ್ಕೂ ಹೆಚ್ಚು ಬೇಟೆ ಪ್ರಕರಣಗಳು ವರದಿಯಾಗಿದ್ದವು. ನಂತರ, ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಕಣ್ಗಾವಲು ವ್ಯವಸ್ಥೆಯನ್ನು ಸುಧಾರಿಸಿದ ಪರಿಣಾಮ, ಪರಿಸ್ಥಿತಿ ಸುಧಾರಿಸಿದೆ. 2022ರಲ್ಲಿ ಒಂದೇ ಒಂದು ಬೇಟೆ ಪ್ರಕರಣ ವರದಿಯಾಗಿರಲಿಲ್ಲ. 1970ರ ನಂತರ ಮೊದಲ ಸಲ ಶೂನ್ಯ ಬೇಟೆ ದಾಖಲಾಯಿತು. ಕಳೆದ ವರ್ಷವೂ ಯಾವುದೇ ಬೇಟೆ ನಡೆದಿರಲಿಲ್ಲ. ಮಾನಸ್‌ನಲ್ಲಿಯೂ ಮೂರು ವರ್ಷಗಳಿಂದ ಘೇಂಡಾಮೃಗ ಅಥವಾ ಹುಲಿ ಬೇಟೆ ವರದಿಯಾಗಿಲ್ಲ. ಬೇಟೆ ನಡೆದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ, ಬೇಟೆ ನಡೆಯದಂತೆ ಕೆಲಸ ಮಾಡಿದ್ದಕ್ಕೆ ಯಶಸ್ಸು ಲಭಿಸಿದೆ' ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನೇಪಾಳದ ಸಾಧನೆ
ನೇಪಾಳದಲ್ಲಿ ಒಟ್ಟು 752 ಘೇಂಡಾಮೃಗಗಳಿವೆ. 2021ರಿಂದ 2024ರ ನಡುವೆ ಅಲ್ಲಿ 4 ಬೇಟೆ ಪ್ರಕರಣಗಳು ವರದಿಯಾಗಿದ್ದವು. ಆದರೆ, 2025ರಲ್ಲಿ ಒಂದೇ ಒಂದೂ ನಡೆದಿಲ್ಲ. ಜೊತೆಗೆ, 2011ರಿಂದ ಈವರೆಗೆ ಘೇಂಡಾಮೃಗ ಬೇಟೆ ವಿಚಾರದಲ್ಲಿ 10 ವರ್ಷ 'ಸೊನ್ನೆ' ಸುತ್ತಿರುವುದು ವಿಶೇಷ.

ಘೇಂಡಾಮೃಗ ಮಾತ್ರವಲ್ಲದೆ, ಹುಲಿ ಮತ್ತು ಆನೆಗಳ ಬೇಟೆ ವಿಚಾರದಲ್ಲಿಯೂ 'ಶೂನ್ಯ' ಸಾಧನೆ ಮಾಡಿದೆ ನೇಪಾಳ. ಆ ಮೂಲಕ, ಏಕಕಾಲದಲ್ಲಿ ಇಂತಹ ದಾಖಲೆ ಬರೆದ ವಿಶ್ವದ ಮೊದಲ ದೇಶ ಎನಿಸಿಕೊಂಡಿದೆ.

ಇಂಡೋನೇಷ್ಯಾದಲ್ಲಿ ಒಟ್ಟು 100 ಸುಮಾತ್ರಾ ಹಾಗೂ ಜವಾ ಘೇಂಡಾಮೃಗಗಳಿವೆ. 2019-2023ರ ಅವಧಿಯಲ್ಲಿ 18-26 ಸಲ ಬೇಟೆ ನಡೆದಿದ್ದವು. ಆದರೆ, ಕಳೆದ ವರ್ಷ ಒಂದೂ ಪ್ರಕರಣ ವರದಿಯಾಗಿಲ್ಲ.

- ಸೋನಾಲಿ ಘೋಷ್‌, ಮಾನಸ್ ರಾಷ್ಟ್ರೀಯ ಉದ್ಯಾನದ ನಿರ್ದೇಶಕಿಮಾನಸ್‌ ಹುಲ್ಲುಗಾವಲು ಅನ್ಯ ಸಸ್ಯಗಳಿಂದಾಗಿ ಹಾಳಾಗುತ್ತಿದೆ. ಇಲ್ಲಿ ಸದ್ಯ 40ಕ್ಕೂ ಅಧಿಕ ಖಡ್ಗಮೃಗಗಳಿವೆ. ಅವುಗಳು ತಿನ್ನುವ ಹುಲ್ಲನ್ನು ಉಳಿಸಿಕೊಳ್ಳುವುದಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries