ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) 'ತಾರ್ಕಿಕ ವ್ಯತ್ಯಾಸ' ಏನೆಂಬುದನ್ನು ಚುನಾವಣಾ ಆಯೋಗ ಸ್ಪಷ್ಟವಾಗಿ ತಿಳಿಸಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಸೂಚಿಸಿದೆ.
ಅಲ್ಲದೆ ಅಂತಹ ವ್ಯತ್ಯಾಸವನ್ನು ಸರಿಪಡಿಸಲು ಅಗತ್ಯವಿರುವ ದಾಖಲೆಗಳ ಕುರಿತು ನಿರ್ದಿಷ್ಟ ಮಾರ್ಗದರ್ಶನವನ್ನೂ ಆಯೋಗ ನೀಡಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್, ಜಾಯ್‌ಮಾಲ್ಯಾ ಬಾಗ್ಚಿ ಮತ್ತು ವಿ. ಮೋಹನಾ ಅವರ ಪೀಠ ಹೇಳಿದೆ.
ಮತದಾರರಿಗೆ ವೈಯಕ್ತಿಕವಾಗಿ ಹಾಜರಾಗುವಂತೆ ಒತ್ತಾಯಿಸುವ ಬದಲು ವಾಟ್ಸ್‌ಆಯಪ್ ಅಥವಾ ಇಮೇಲ್ ಮೂಲಕ ದಾಖಲೆಗಳನ್ನು ಸಲ್ಲಿಸುವ ಆಯ್ಕೆಗಳನ್ನು ನೀಡಬೇಕು ಎಂದೂ ಪೀಠ ಸೂಚಿಸಿದೆ.
ದೆಹಲಿಯಲ್ಲಿನ ಎಸ್‌ಐಆರ್ ಪ್ರಕ್ರಿಯೆಗಳ ಕೆಲ ಅಂಶಗಳನ್ನು ಪ್ರಶ್ನಿಸಿ ಅಂಜಲಿ ಭಾರದ್ವಾಜ್ ಮತ್ತು ಅಮೃತಾ ಜೋಹ್ರಿ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಪೀಠ, ಸಂಬಂಧಿಸಿದವರಿಗೆ ನೋಟಿಸ್ ಜಾರಿಗೊಳಿಸಿದೆ.
ವ್ಯಕ್ತಿಯ ಮತದಾನದ ಅರ್ಹತೆಗೆ ಯಾವುದೇ ತಾರ್ಕಿಕ ಸಂಬಂಧವಿಲ್ಲದ ಕಾರಣಗಳಿಗೂ ನೋಟಿಸ್ ನೀಡಲಾಗುತ್ತಿದೆ ಎಂದು ಅರ್ಜಿದಾರರ ಪರ ವಕೀಲರಾದ ಪ್ರಶಾಂತ್ ಭೂಷಣ್ ಮತ್ತು ನೇಹಾ ರಾಠಿ ವಾದಿಸಿದರು. ಪೋಷಕರೊಂದಿಗೆ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಂತರ, ಅಜ್ಜ-ಅಜ್ಜಿಯರೊಂದಿಗೆ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಂತರ ಅಥವಾ ಒಡಹುಟ್ಟಿದವರ ನಡುವೆ ಒಂಬತ್ತು ತಿಂಗಳೊಳಗಿನ ಅಂತರದಂತಹ ತಾರ್ಕಿಕ ವ್ಯತ್ಯಾಸಗಳಿಗೆ ನೋಟಿಸ್ ನೀಡಲಾಗಿದೆ ಎಂಬುದನ್ನು ಅವರು ಪೀಠದ ಗಮನಕ್ಕೆ ತಂದರು.
ಇವೇ ಅಲ್ಲದೆ, ಆಪಾದಿತ ವ್ಯತ್ಯಾಸಗಳ ನಿಖರ ಸ್ವರೂಪವನ್ನು ನೋಟಿಸ್‌ನಲ್ಲಿ ಸ್ಪಷ್ಟವಾಗಿ ತಿಳಿಸುತ್ತಿಲ್ಲ. ಅವುಗಳನ್ನು ಹೇಗೆ ಸರಿಪಡಿಸಬಹುದು ಎಂಬುದರ ಮಾರ್ಗದರ್ಶನವೂ ಅಲ್ಲಿಲ್ಲ. ನಿವಾಸಗಳನ್ನು ಬದಲಿಸಿದ ಮತದಾರರಿಗೆ ಅರ್ಜಿ ನಮೂನೆ-6 ಅನ್ನು ಭರ್ತಿ ಮಾಡಲು ಹೇಳಲಾಗುತ್ತಿದೆ, ಆದರೆ ಅದು ಹೊಸ ಮಾತದಾರರಿಗೆ ಮಾತ್ರ ಅನ್ವಯ ಎಂದು ಅವರು ವಾದಿಸಿದರು.

