ದಶಕಗಳಿಂದ ಭಕ್ತರ ನೋವು-ನಲಿವುಗಳಿಗೆ ಸಾಕ್ಷಿಯಾಗಿದ್ದ, ನಂಬಿಕೆಯ ಕಾವಲುಗಾರನಂತೆ ನಿಂತಿದ್ದ 'ಖಡೇ ಹನುಮಾನ್' ದೇವಾಲಯ ನೆಲಸಮವಾಗಿದೆ. ಆದರೆ, ಧ್ವಂಸಗೊಂಡ ಗರ್ಭಗುಡಿಯಲ್ಲಿ ಕಾಲನ ಹೊಡೆತಕ್ಕೂ, ಮನುಷ್ಯ ಮತ್ತು ಯಂತ್ರಗಳ ಬಲಕ್ಕೂ ಜಗ್ಗದೆ, ಗಂಭೀರತೆಯಲ್ಲಿ ಹನುಮಂತ ಮಾತ್ರ ಅಚಲವಾಗಿ ನಿಂತಿದ್ದಾನೆ... ಇಂಚೂ ಜರುಗದೆ!
ಮಾರುತಿ ಮೂರ್ತಿಯನ್ನು ಅಲ್ಲಿಂದ ಸ್ಥಳಾಂತರಿಸಲು ನಾಲ್ಕು ಬಾರಿ ನಿರಂತರ ಪ್ರಯತ್ನಗಳು ನಡೆದವು. ಬೃಹತ್ ಹೈಡ್ರಾಲಿಕ್ ಕ್ರೇನ್‌ಗಳು ಅಬ್ಬರಿಸಿದವು, ಚೈನ್‌ಗಳನ್ನು ಕಟ್ಟಿ ಯಂತ್ರಗಳ ಮೂಲಕ ಎಳೆಯಲಾಯಿತು. ಆದರೂ ಭಜರಂಗಬಲಿ ತನ್ನ ಜಾಗದಿಂದ ಒಂದು ನೂಲು ಎಳೆಯಷ್ಟೂ ಜರುಗಲಿಲ್ಲ. ಯಂತ್ರಗಳ ಶಕ್ತಿಯೆಲ್ಲಾ ಆಂಜನೇಯನ ಮೂರ್ತಿಯ ಮುಂದೆ ಶರಣಾಗಿ ಹೋದವು. ಸೋಲೊಪ್ಪಿಕೊಂಡ ಅಧಿಕಾರಿಗಳು ಕೊನೆಗೂ ತೆರವು ಕಾರ್ಯಾಚರಣೆಯನ್ನು ತಾತ್ಕಲಿಕವಾಗಿ ನಿಲ್ಲಿಸಿದ್ದಾರೆ.
ಈ ದೃಶ್ಯವನ್ನು ಕಣ್ಣಾರೆ ಕಂಡ ಸ್ಥಳೀಯರು ಮತ್ತು ಭಕ್ತರ ಕಣ್ಣುಗಳಲ್ಲಿ ಭಕ್ತಿಭಾಷ್ಪ ತುಂಬಿ ಹರಿಯುತ್ತಿದೆ. 'ಇದು ಬರಿ ಕಲ್ಲಿನ ಮೂರ್ತಿಯಲ್ಲ, ಈ ನೆಲದಲ್ಲಿ ಆಳವಾಗಿ ಬೇರೂರಿರುವ ದೈವಿಕ ಪವಾಡ' ಎಂದು ಜನರು ನಂಬುತ್ತಿದ್ದಾರೆ. ಪ್ರತಿಯೊಬ್ಬರ ಬಾಯಲ್ಲಿ ಒಂದೇ ಮಾತು -'ಇದು ಪವಾಡವೇ ಸರಿ, ಹನುಮಂತ ತಾನಾಗಿಯೇ ಎದ್ದು ಹೋಗಲು ಒಪ್ಪುತ್ತಿಲ್ಲ!
ಈ ಘಟನೆ ಬಗ್ಗೆ ಜನರ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಇಲ್ಲಿದೆ....
ಪ್ರಶ್ನೆ 1: ಉಜ್ಜಯಿನಿಯಲ್ಲಿ ಏನಾಗುತ್ತಿದೆ ಮತ್ತು ಇಲ್ಲಿಯವರೆಗೂ ಏನೇನು ನಡೆದಿದೆ?
ಉತ್ತರ: ಇಲ್ಲಿನ ಕಂಠಾಲ್ ವೃತ್ತದಿಂದ ಛತ್ರಿ ಚೌಕ್ ರಸ್ತೆಯನ್ನು ಅಗಲೀಕರಣ ಮಾಡಲಾಗುತ್ತಿದ್ದು ಈ ಮಾರ್ಗದಲ್ಲಿ ಬರುವ 'ಖಡೇ ಹನುಮಾನ್' ದೇವಾಲಯವನ್ನು ಬೇರೆ ಕಡೆ ಸ್ಥಳಾಂತರಿಸಲು ಜಿಲ್ಲಾ ಆಡಳಿತ ಮುಂದಾಗಿದೆ.
ಆಗಸ್ಟ್ 30ರಂದು ದೇವಾಲಯವನ್ನು ತೆರವುಗೊಳಿಸುವ ಮೊದಲ ಯತ್ನ ನಡೆದಿತ್ತಾದರೂ, ಭಕ್ತರ ಪ್ರತಿಭಟನೆಯಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ಸೆಪ್ಟೆಂಬರ್ 1 ರಂದು ನಡೆದ 16 ಗಂಟೆಗಳ ಸುದೀರ್ಘ ಕಾರ್ಯಾಚರಣೆಯಲ್ಲಿ ದೇವಾಲಯದ ಶಿಖರವನ್ನು ತೆರವುಗೊಳಿಸಲಾಯಿತಾದರೂ, ಮತ್ತೆ ಪ್ರತಿಭಟನೆ ವ್ಯಕ್ತವಾಗಿದ್ದರಿಂದ ಕೆಲಸ ನಿಲ್ಲಿಸಲಾಯಿತು. ಅಂತಿಮವಾಗಿ ಅರ್ಚಕರು ಹಾಗೂ ಸ್ಥಳೀಯ ಸಂಘಟನೆಗಳ ಸಮ್ಮತಿಯೊಂದಿಗೆ ದೇವಾಲಯದ ಹೊರಭಾಗವನ್ನು ಕೆಡವಲಾಯಿತು.
ಸೆಪ್ಟೆಂಬರ್ 4 ರಂದು 8 ಅಡಿ ಎತ್ತರದ ಹನುಮಂತನ ಮೂರ್ತಿಯನ್ನು ತೆರವುಗೊಳಿಸಲು ಹಲವಾರು ತಂಡಗಳು ಪ್ರಯತ್ನಿಸಿದವು. ಆದರೆ ಅದು ಸ್ವಲ್ಪವೂ ಜರುಗಲಿಲ್ಲ. ಒಟ್ಟು ನಾಲ್ಕು ಬಾರಿ ಪ್ರಯತ್ನಿಸಿದರೂ ಮೂರ್ತಿಯನ್ನು ಅಲುಗಾಡಿಸಲು ಸಾಧ್ಯವಾಗಲಿಲ್ಲ. ಕೊನೆಯ ಯತ್ನದಲ್ಲಿ ಹೈಡ್ರಾಲಿಕ್ ಕ್ರೇನ್ ಬಳಸಿದರೂ ವಿಫಲವಾಯಿತು. ವಿಗ್ರಹದ ಸುತ್ತ ಒಂದೂವರೆ ಅಡಿ ಆಳದವರೆಗೆ ಅಗೆದಿದೆಯಾದರೂ ತಳಪಾಯ ಸಿಕ್ಕಿಲ್ಲ. ಹೀಗಾಗಿಯೇ ಕ್ರೇನ್ ಮತ್ತು ಜೆಸಿಬಿ ಯಂತ್ರಗಳಿಂದಲೂ ಅದನ್ನು ಅಲ್ಲಾಡಿಸಲು ಸಾಧ್ಯವಾಗಿಲ್ಲ. ಸದ್ಯ ಅದರ ಆಳವನ್ನು ತಿಳಿಯಲು ವೈಜ್ಞಾನಿಕವಾಗಿ ಸ್ಕ್ಯಾನಿಂಗ್ ಮೊರೆ ಹೋಗಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಶ್ನೆ 2: ಇದು ಸಾವಿರ ವರ್ಷಗಳ ಹಳೆಯ ವಿಗ್ರಹವೇ?
ಉತ್ತರ: ವಿಗ್ರಹದ ಕಾಲಾವಧಿಗೆ ಸಂಬಂಧಿಸಿದಂತೆ ಎರಡು ವಾದಗಳಿವೆ. ಕೆಲವರು ಇದನ್ನು 150 ರಿಂದ 170 ವರ್ಷಗಳು ಹಳೆಯದು ಎಂದು ಹೇಳುತ್ತಿದ್ದರೆ, ಮತ್ತೆ ಕೆಲವರು ಇದು ಸಾವಿರ ವರ್ಷಗಳಷ್ಟು ಹಳೆಯದು ಎನ್ನುತ್ತಿದ್ದಾರೆ.
ಉಜ್ಜಯಿನಿಯ ವಿಕ್ರಮ್ ವಿಶ್ವವಿದ್ಯಾಲಯದ ಪುರಾತತ್ವ ತಜ್ಞ ಪ್ರೊ. ಡಾ. ರಮಣ್ ಸೋಲಂಕಿ ಅವರು ವಿಗ್ರಹದ ಕಲ್ಲನ್ನು 'ಬಸಾಲ್ಟ್' ಎಂದು ಗುರುತಿಸಿದ್ದು, ಇದು ಪರಮಾರ ರಾಜವಂಶಸ್ಥರ ಕಾಲದ್ದಾಗಿರಬಹುದು ಎಂದು ಅಂದಾಜಿಸಿದ್ದಾರೆ. ಹಲವಾರು ವರ್ಷಗಳಿಂದ ವಿಗ್ರಹಕ್ಕೆ ಸಿಂಧೂರ ಲೇಪಿಸುತ್ತಾ ಬಂದಿರುವುದರಿಂದ ಅದರ ಮೂಲ ಆಕಾರ ಮತ್ತು ಕೆತ್ತನೆಯ ಲಕ್ಷಣಗಳು ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಆದ್ದರಿಂದ ಕೇವಲ ನೋಡಿದ ಮಾತ್ರಕ್ಕೆ ಇದರ ನಿಖರ ಅವಧಿಯನ್ನು ತಿಳಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದು 150 ವರ್ಷ ಹಳೆಯದೆಂದು ಸಾಬೀತಾದರೆ, ಅದನ್ನು ಬೇರೆಡೆಗೆ ಸ್ಥಳಾಂತರಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬೇಕು. ಆದರೆ ತನಿಖೆಯ ವೇಳೆ ಇದು ಮಹತ್ವದ್ದು ಎಂದು ತಿಳಿದುಬಂದರೆ, ಅದನ್ನು ಸಂರಕ್ಷಿಸುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಮತ್ತು ತಜ್ಞರ ಸಮಿತಿಯು ಇದನ್ನು ಹೇಗೆ ನಿರ್ವಹಿಸಬೇಕೆಂದು ನಿರ್ಧರಿಸುತ್ತದೆ ಎಂದು ಪುರಾತತ್ವ ತಜ್ಞ ಬಿ.ಕೆ.ಲೋಖಂಡೆ ಹೇಳುತ್ತಾರೆ.

ಖಡೇ ಹನುಮಾನ್'
ಪ್ರಶ್ನೆ 3: ವಿಗ್ರಹ ಜರುಗದಂತೆ ಅದರ ಅಡಿಯಲ್ಲಿ ತಡೆದಿರುವುದೇನು?
ಉತ್ತರ: ವಿಗ್ರಹ ಮತ್ತು ಅದರ ಅಡಿಯಲ್ಲಿರುವ ಬಂಡೆ ಸಂಯೋಜನೆಗೊಂಡಿರುವ ಸಾಧ್ಯತೆ ಇದೆ ಎಂದು ತಜ್ಞರ ಹೇಳುತ್ತಾರೆ. ತಂತ್ರಜ್ಞಾನದ ಈ ಕಾಲಘಟ್ಟದಲ್ಲಿ ಕ್ರೇನ್‌ಗಳು ಇಂತಹ ವಸ್ತುಗಳನ್ನು ಸುಲಭವಾಗಿ ಕಿತ್ತು ಹಾಕಬಲ್ಲವು. ಆದರೆ ಇದು ಇಂಚೂ ಕದಲದಿರುವುದರಿಂದ, ವಿಗ್ರಹ ಮತ್ತು ಅದರ ಕೆಳಗಿನ ಬಂಡೆಯು ಒಂದೇ ಶಿಲೆಯ ಭಾಗವಾಗಿದೆ ಎಂದು ಡಾ.ಡಿ.ಆರ್.ತಿವಾರಿ ಹೇಳಿದ್ದಾರೆ. ಇಲ್ಲಿನ ಭೂಸಂರಚನೆಯ ಸಮೀಕ್ಷೆ ನಡೆಸುವವರೆಗೂ ವಿಗ್ರಹದ ತಳವು ಭೂಮಿಯೊಳಗೆ ಎಷ್ಟು ಆಳದವರೆಗೆ ಹೋಗಿದೆ ಎಂಬುದು ಸ್ಪಷ್ಟವಾಗುವುದಿಲ್ಲ ಎಂದು ಹೇಳಿದ್ದಾರೆ.
ಅವರು ಹೇಳುವಂತೆ, ವಿಗ್ರಹ ಮತ್ತು ತಳಭಾಗದ ಬಂಡೆ ಒಂದೇ ಆಗಿರುವುದರಿಂದ ಅದು ಭೂಮಿಯ ಆಳದಲ್ಲಿ ವಿಸ್ತರವಾಗಿ ಹರಡಿಕೊಂಡಿರುತ್ತದೆ. ಹಾಗಾಗಿ ಇವುಗಳನ್ನು ಸ್ಥಳಾಂತರಿಸಲು ಸಾಧ್ಯವಾಗುವುದಿಲ್ಲ ಒಂದೇ ವೇಳೆ ವಿಗ್ರಹವನ್ನು ಸ್ಥಳಾಂತರ ಮಾಡಬೇಕು ಎಂದಾದರೆ ವಿಗ್ರಹವನ್ನು ತುಂಡರಿಸಬೇಕು ಎಂದು ಲೋಖಂಡೆ ಹೇಳಿದ್ದಾರೆ.
ಈ ಕಾರಣಕ್ಕಾಗಿ, ಭಾರತೀಯ ಪುರಾತತ್ವ ಇಲಾಖೆ ಮತ್ತು ಐಐಟಿ ಇಂದೋರ್‌ನ ತಜ್ಞರ ತಂಡ ಭೂಗರ್ಭದ ರಚನೆಯನ್ನು ಸ್ಕ್ಯಾನ್ ಮಾಡುತ್ತಿದೆ. ಇದಕ್ಕಾಗಿ ಜಿಪಿಆರ್ ನಂತಹ ತಂತ್ರಜ್ಞಾನವನ್ನು ಬಳಸಿ ಅಧ್ಯಯನ ಮಾಡಲಾಗುತ್ತಿದೆ. ಇದರಿಂದ ಬಂಡೆ ಮತ್ತು ಸುತ್ತಮುತ್ತಲಿನ ಕಲ್ಲುಗಳು ಹೇಗೆ ಜೋಡಿಸಲ್ಪಟ್ಟಿವೆ, ಅದರ ನೈಜ ಆಳ ಎಷ್ಟು ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಇದನ್ನು ತಿಳಿಯದೆ ಬಲಪ್ರಯೋಗ ಮಾಡಿದರೆ ವಿಗ್ರಹದಲ್ಲಿ ಬಿರುಕು ಮೂಡುವ ಅಥವಾ ಹಾನಿಯಾಗುವ ಅಪಾಯ ಹೆಚ್ಚಿರುತ್ತದೆ ಎಂದು ಅವರು ಹೇಳುತ್ತಾರೆ.
ಪ್ರಶ್ನೆ 4: ಯಾವುದೇ ಹಾನಿಯಾಗದಂತೆ ವಿಗ್ರಹವನ್ನು ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯಬಹುದೇ?
ಉತ್ತರ: ಯಾವುದೇ ಕಾರಣಕ್ಕೂ ವಿಗ್ರಹವನ್ನು ಕತ್ತರಿಸುವುದು ಅಥವಾ ತುಂಡರಿಸುವುದು ಸರಿಯಾದ ಆಯ್ಕೆಯಲ್ಲ ಎಂದು ಅಧಿಕಾರಿಗಳು ಮತ್ತು ತಜ್ಞರು ಒಮ್ಮತ ವ್ಯಕ್ತಪಡಿಸಿದ್ದಾರೆ.
ಯಾವ ಪುರಾತತ್ವ ತಜ್ಞರೂ ಮೂರ್ತಿಯನ್ನು ಕತ್ತರಿಸುವ ಮತ್ತು ವಿಗ್ರಹಕ್ಕೆ ಹಾನಿಯಾಗುವುದನ್ನು ಬಯಸುವುದಿಲ್ಲ. ತಳದ ಕಲ್ಲು ಎಷ್ಟೇ ದೊಡ್ಡದಾಗಿದ್ದರೂ ಅದನ್ನು ವಿಗ್ರಹದ ಭಾಗ ಎಂದೇ ಪರಿಗಣಿಸಲಾಗುತ್ತದೆ. ಕಲ್ಲಿನ ಸುತ್ತಲೂ ಜಾಗರೂಕತೆಯಿಂದ ಅಗೆದು, ಇಡೀ ರಚನೆಯನ್ನು ಒಟ್ಟಾಗಿ ತೆರವುಗೊಳಿಸುವುದು ಒಂದು ಸಂಭಾವ್ಯ ಮಾರ್ಗವಾಗಿದೆ ಎಂದು ಲೋಖಂಡೆ ಹೇಳುತ್ತಾರೆ.
ವಿಗ್ರಹವನ್ನು ಸ್ಥಳಾಂತರ ಮಾಡುವವರೆಗೂ ಹನುಮಂತನ ಮೂರ್ತಿಗೆ ಹಾನಿಯಾಗದಂತೆ ಟೆಂಟ್ ಹಾಕಲಾಗಿದ್ದು ಸುತ್ತಲೂ ಬ್ಯಾರಿಕೇಡ್ ಹಾಕಲಾಗಿದೆ. ಅರ್ಚಕರ ಸಮ್ಮತಿಯೊಂದಿಗೆ ಅಲ್ಲಿ ನಿತ್ಯ ಪೂಜೆ ನಡೆಯುತ್ತಿದೆ. ಇದನ್ನು ನೋಡಲು ಸಾವಿರಾರು ಜನರು ಇಲ್ಲಿಗೆ ಬರುತ್ತಿದ್ದಾರೆ. ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಶ್ನೆ 5: ರಸ್ತೆ ಅಗಲೀಕರಣದ ಅಗತ್ಯವೇನು? ಮತ್ತು ಮುಂದೆ ಏನಾಗಲಿದೆ?
ಉತ್ತರ: 2028ರ ಸಿಂಹಸ್ಥ ಕುಂಭಮೇಳವೇ ರಸ್ತೆ ಅಗಲೀಕರಣಕ್ಕೆ ಮುಖ್ಯ ಕಾರಣವಾಗಿದೆ. ಈ ಸಮಯದಲ್ಲಿ ಭಾರಿ ಜನಸಂದಣಿ ಉಂಟಾಗುವುದರಿಂದ ರಸ್ತೆ ಅಗಲೀಕರಣ ಮಾಡುವುದು ಅನಿರ್ವಾಯವಾಗಿದೆ. ಈಗಿರುವ 9 ಮೀಟರ್ ಅಗಲದ ರಸ್ತೆಯನ್ನು 15 ಮೀಟರ್‌ಗೆ ಅಗಲಗೊಳಿಸಲಾಗುತ್ತಿದೆ. ಈ ಮಾರ್ಗದಲ್ಲಿ ಒಟ್ಟು 4 ಧಾರ್ಮಿಕ ಕೇಂದ್ರಗಳು ಬರುತ್ತವೆ, ಉಳಿದ ಮೂರನ್ನು ಯಾವುದೇ ತೊಂದರೆಯಿಲ್ಲದೆ ಸ್ಥಳಾಂತರಿಸಲಾಗಿದೆ, ಆದರೆ ಖಡೇ ಹನುಮಾನ್ ಮೂರ್ತಿಯೊಂದೇ ಸವಾಲಾಗಿ ಪರಿಣಮಿಸಿದೆ.
ಸ್ಥಳೀಯರು ಇದನ್ನು 'ಡಾಕ್ಟರ್ ಹನುಮಾನ್' ಮತ್ತು ದೇವಾಲಯವನ್ನು 'ಉಜ್ಜಯಿನಿಯ ಏಮ್ಸ್ (AIIMS)' ಎಂದು ಕರೆಯುತ್ತಾರೆ. ಇಲ್ಲಿ ಪ್ರಾರ್ಥಿಸಿದರೆ ಕಾಯಿಲೆಯಿಂದ ಬಳಲುತ್ತಿರುವವರು ಗುಣಮುಖರಾಗುತ್ತಾರೆ ಮತ್ತು ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆಯಿದೆ. ಕೇವಲ ಹಿಂದೂಗಳಷ್ಟೇ ಅಲ್ಲದೆ ಮುಸ್ಲಿಂ ಕುಟುಂಬಗಳೂ ಇಲ್ಲಿಗೆ ಬಂದು ಪ್ರಾರ್ಥಿಸುತ್ತವೆ ಎಂದು ಅರ್ಚಕರು ಹೇಳುತ್ತಾರೆ.
ವಿಗ್ರಹ ತೆರವು ಮಾಡುವ ಪ್ರಕ್ರಿಯೆ ತಾತ್ಕಲಿಕವಾಗಿ ನಿಲ್ಲಿಸಲಾಗಿದ್ದು ತಜ್ಞರ ವರದಿ ಬಂದ ಬಳಿಕ ವಿಗ್ರಹವನ್ನು ಸುರಕ್ಷಿತವಾಗಿ ಹೇಗೆ ತೆರವುಗೊಳಿಸಬಹುದು ಎಂಬುದನ್ನು ನಿರ್ಧರಿಸಲಾಗುತ್ತದೆ. ಒಂದು ವೇಳೆ ವಿಗ್ರಹವನ್ನು ಸುರಕ್ಷಿತವಾಗಿ ತೆರವುಗೊಳಿಸಲು ಸಾಧ್ಯವಾಗದಿದ್ದರೆ, ಈ ನಿರ್ದಿಷ್ಟ ಭಾಗವನ್ನು ಉಳಿಸುವಂತೆ ರಸ್ತೆಯ ವಿನ್ಯಾಸವನ್ನೇ (Design) ಮಾರ್ಪಡಿಸುವ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

