ನವದೆಹಲಿ: 'ವಿಶ್ವ ಹಿಂದೂ ಪರಿಷದ್ (ವಿಎಚ್‌ಪಿ) ದಿವಂಗತ ಮುಖಂಡ ಅಶೋಕ್ ಸಿಂಘಾಲ್ ಅವರಂತಹ ಧೀಮಂತರ ತ್ಯಾಗದಿಂದಲೇ ಅಯೋಧ್ಯೆಯ ಭವ್ಯ ರಾಮಮಂದಿರ ಸಾಕಾರಗೊಂಡಿತು' ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಅಶೋಕ್ ಸಿಂಘಾಲ್ ಶತಮಾನೋತ್ಸವದ ಸಂದರ್ಭದಲ್ಲಿ ಅವರನ್ನು ಸ್ಮರಿಸಿರುವ ಪ್ರಧಾನಿ ಮೋದಿ, 'ಸಮಾಜದಲ್ಲಿ ಸೌಹಾರ್ದತೆ ನೆಲೆಸಬೇಕು ಹಾಗೂ ಭ್ರಾತೃತ್ವದ ಸಂದೇಶ ಮರುಸ್ಥಾಪನೆಯಾಗಬೇಕು ಎಂಬುದು ಅವರ ಬಲವಾದ ನಂಬಿಕೆಯಾಗಿತ್ತು' ಎಂದು ಉಲ್ಲೇಖಿಸಿದ್ದಾರೆ.
'ರಾಮ ಜನ್ಮಭೂಮಿ ಆಂದೋಲನದಲ್ಲಿ ಸಿಂಘಾಲ್ ಅವರ ಮಹತ್ವದ ಪಾತ್ರವನ್ನು ಸ್ಮರಿಸದೆ ಅವರ ವ್ಯಕ್ತಿತ್ವ ಪರಿಪೂರ್ಣವಾಗುವುದಿಲ್ಲ. ಇಂದು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ತಲೆಎತ್ತಿ ನಿಂತಿದೆ ಎಂದರೆ, ಅದಕ್ಕೆ ನಿಸ್ವಾರ್ಥವಾಗಿ ಶ್ರಮಿಸಿದ ಅವರಂತಹ ಧೀಮಂತರೇ ಕಾರಣ' ಎಂದು ಹೇಳಿದ್ದಾರೆ.
'ರಾಷ್ಟ್ರ ನಿರ್ಮಾಣಕ್ಕೆ ಬದ್ಧರಾಗಿದ್ದ ಸಿಂಘಾಲ್ ಅವರು ದಶಕಗಳ ಕಾಲ ಹಗಲಿರುಳು ಶ್ರಮಿಸುವುದನ್ನು ಕಂಡಿದ್ದೇನೆ. ಅತಿ ದುರ್ಗಮ ಹಾಗೂ ದೂರದ ಪ್ರದೇಶಗಳಿಗೂ ಅವರು ಕಷ್ಟಕರ ಪ್ರಯಾಣ ಕೈಗೊಳ್ಳುತ್ತಿದ್ದರು. ಗುಜರಾತ್‌ನ ಬುಡಕಟ್ಟು ಪ್ರದೇಶಗಳಲ್ಲಿ ಅವರು ಸಂಚರಿಸುತ್ತಿದ್ದರು. 2001ರ ಕಚ್ ಭೂಕಂಪದ ಸಂದರ್ಭದಲ್ಲಿ ಅವರೊಂದಿಗೆ ಕೆಲಸ ಮಾಡಿದ ಅನುಭವ ಮರೆಯಲಾಗದ್ದು' ಎಂದಿದ್ದಾರೆ.
ಅಶೋಕ್ ಸಿಂಘಾಲ್ ಅವರು 1926ರ ಸೆಪ್ಟೆಂಬರ್ 27ರಂದು ಜನಿಸಿ, 2015ರ ನವೆಂಬರ್ 17ರಂದು ನಿಧನರಾದರು.

