HEALTH TIPS

ರಾಷ್ಟ್ರೀಯ ಸಂಶೋಧನಾ ಕೇಂದ್ರವಾಗಿ ಮಂಜೇಶ್ವರದ ‘ಗಿಳಿವಿಂಡು’ ಅಭಿವೃದ್ಧಿ: ವರ್ಷದ ಸಾಂಸ್ಕøತಿಕ ಸರಣಿಗೆ ಮೊಯ್ಲಿ ಚಾಲನೆ

ಮಂಜೇಶ್ವರ: ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಪವಿತ್ರ ಕರ್ಮಭೂಮಿ ಹಾಗೂ ಐತಿಹಾಸಿಕ ನಿವಾಸ ‘ಗಿಳಿವಿಂಡು’ ಮತ್ತು ಅದಕ್ಕೆ ಹೊಂದಿಕೊಂಡಿರುವ ಆವರಣವನ್ನು ರಾಷ್ಟ್ರಮಟ್ಟದ ಉನ್ನತ ಸಂಶೋಧನಾ ಕೇಂದ್ರವನ್ನಾಗಿ ರೂಪಿಸಲು ಬದ್ಧ ಪ್ರಯತ್ನ ನಡೆಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಎಂ. ವೀರಪ್ಪ ಮೊಯ್ಲಿ ಘೋಷಿಸಿದರು. 


ಮಂಜೇಶ್ವರದ ಗಿಳಿವಿಂಡು ಸಂಕೀರ್ಣದ ‘ಪಾರ್ತಿಸುಬ್ಬ ವೇದಿಕೆ’ಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಗೋವಿಂದ ಪೈ ಸ್ಮಾರಕ ಟ್ರಸ್ಟ್‍ನ 2026–27ನೇ ಸಾಲಿನ ವಾರ್ಷಿಕ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸರಣಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಬಹುಭಾಷಾ ಅಧ್ಯಯನದ ಮುಂಚೂಣಿ ಕೇಂದ್ರವಾಗುವ ಗುರಿ:

ರಾಷ್ಟ್ರಕವಿ ಗೋವಿಂದ ಪೈ ಅವರ ವಿದ್ವತ್ ಪರಂಪರೆಯನ್ನು ಸ್ಮರಿಸಿದ ವೀರಪ್ಪ ಮೊಯ್ಲಿ, "ಗೋವಿಂದ ಪೈಗಳು ಕೇವಲ ಒಂದು ಭಾಷೆ ಅಥವಾ ಪ್ರಾಂತಕ್ಕೆ ಸೀಮಿತವಾದವರಲ್ಲ; ಹಲವು ಭಾಷೆಗಳ ಪಾಂಡಿತ್ಯ ಹೊಂದಿದ್ದ ಜ್ಞಾನನಿಧಿ. ಹೀಗಾಗಿ ಕೇರಳ ಮತ್ತು ಕರ್ನಾಟಕ ಉಭಯ ರಾಜ್ಯ ಸರ್ಕಾರಗಳ ಸಮನ್ವಯ ಹಾಗೂ ಸಹಭಾಗಿತ್ವದಲ್ಲಿ ಈ ಸ್ಮಾರಕವು ಅಂತಾರಾಜ್ಯ ಸಾಂಸ್ಕೃತಿಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕನ್ನಡ, ಮಲಯಾಳಂ ಸೇರಿದಂತೆ ಭಾರತದ ವಿಭಿನ್ನ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಪರಂಪರೆಗಳ ಆಳವಾದ ಸಂಶೋಧನೆ ಹಾಗೂ ಪುನರುತ್ಥಾನಕ್ಕೆ ಪೂರಕವಾದ ವಾತಾವರಣ ಇಲ್ಲಿ ನಿರ್ಮಾಣವಾಗಬೇಕು," ಎಂದು ಆಶಯ ವ್ಯಕ್ತಪಡಿಸಿದರು.

ಸ್ಮಾರಕವು ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಗಳಿಂದ ಜೀವಂತವಾಗಿರಲು ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ಕನಿಷ್ಠ ಒಂದು ಅಥವಾ ಎರಡು ಅರ್ಥಪೂರ್ಣ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಉಭಯ ರಾಜ್ಯಗಳ ಪೈ ಅಭಿಮಾನಿಗಳು, ಸಂಶೋಧಕರು, ಸ್ಥಳೀಯ ಸಾರ್ವಜನಿಕರು ಹಾಗೂ ಸಾಹಿತ್ಯ-ಕಲಾ ಪ್ರೇಮಿಗಳನ್ನು ಒಗ್ಗೂಡಿಸಿಕೊಂಡು ಈ ಯೋಜನೆಗಳನ್ನು ಮುನ್ನಡೆಸಲಾಗುವುದು ಎಂದು ಅವರು ವಿವರಿಸಿದರು.

ತೇರು ಎಳೆಯುವ ಕಾಯಕಕ್ಕೆ ಡಾ. ರಮಾನಂದ ಬನಾರಿ ಕರೆ:

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ವಾಂಸ ಹಾಗೂ ಕವಿ ಡಾ. ರಮಾನಂದ ಬನಾರಿ ಮಾತನಾಡಿ, "ವೀರಪ್ಪ ಮೊಯ್ಲಿ ಅವರು ರಾಷ್ಟ್ರದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಮಹತ್ವದ ಕೊಡುಗೆ ನೀಡಿದ ಆಡಳಿತ ಪರಿಣಿತರು ಮಾತ್ರವಲ್ಲದೆ, ಸ್ವತಃ ಹೃದಯವಂತ ಸಾಹಿತಿಯೂ ಆಗಿದ್ದಾರೆ. ಹೀಗಾಗಿ ರಾಷ್ಟ್ರಕವಿಯೊಬ್ಬರ ಸಾಹಿತ್ಯಿಕ ಮಹತ್ವ ಹಾಗೂ ಸ್ಮಾರಕದ ಅಗತ್ಯವನ್ನು ಆಳವಾಗಿ ಬಲ್ಲವರಾಗಿದ್ದು, ಗಿಳಿವಿಂಡಿನ ಸವಾರ್ಂಗೀಣ ವಿಕಾಸಕ್ಕೆ ಸ್ಪಷ್ಟ ದೂರದೃಷ್ಟಿ ಹೊಂದಿದ್ದಾರೆ. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ತಮ್ಮ ಕಾವ್ಯದಲ್ಲಿ ಹೇಳಿದಂತೆ, ಈ ಸಾಂಸ್ಕೃತಿಕ ತೇರನ್ನು ಮುನ್ನಡೆಸಲು ನಾವೆಲ್ಲರೂ ಜತೆಯಾಗಿ ಹೆಗಲು ಕೊಟ್ಟು ತೇರು ಎಳೆಯುವ ಕಾಯಕ ಮಾಡಬೇಕಿದೆ," ಎಂದರು.

ಸಮಗ್ರ ಮಾಸ್ಟರ್ ಪ್ಲಾನ್ ಮತ್ತು ಗೌರವ ಸಲ್ಲಿಕೆ:

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಙಳ್ ಮಾತನಾಡಿ, ಗಿಳಿವಿಂಡು ಕೇವಲ ಪ್ರವಾಸಿ ತಾಣವಾಗದೆ ಜ್ಞಾನ ಕೇಂದ್ರವಾಗಲು ಅಲ್ಪಾವಧಿ ಹಾಗೂ ದೀರ್ಘಾವಧಿಯ ಸುಸ್ಥಿರ ಯೋಜನೆಗಳನ್ನು ಒಳಗೊಂಡ ಸ್ಪಷ್ಟ ‘ಮಾಸ್ಟರ್ ಪ್ಲಾನ್’ ರೂಪಿಸಿ ಅನುಷ್ಠಾನಕ್ಕೆ ತರಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ ಅವರು ಗಡಿನಾಡಿನಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ದೀರ್ಘ ಕಾಲದಿಂದ ಸೇವೆ ಸಲ್ಲಿಸುತ್ತಿರುವ ಡಾ. ರಮಾನಂದ ಬನಾರಿ ಅವರ ಸಾಹಿತ್ಯ ತಪಸ್ಸನ್ನು ಗುರುತಿಸಿ, ಅವರಿಗೆ ಕರ್ನಾಟಕ ಸರಕಾರದಿಂದ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ದೊರೆಯುವಂತೆ ವೀರಪ್ಪ ಮೊಯ್ಲಿ ಅವರು ಶಿಫಾರಸು ಮಾಡಿ ಮುತುವರ್ಜಿ ವಹಿಸಬೇಕು ಎಂದು ಮನವಿ ಮಾಡಿದರು. ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ ಅವರು ಸಮಾರಂಭಕ್ಕೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಯಕ್ಷಗಾನ ತಾಳಮದ್ದಳೆ ಕ್ಷೇತ್ರದ ಸಂಘಟಕ ಹಾಗೂ ಸಂಯೋಜಕರಾದ ಸತೀಶ್ ಅಡಪ ಸಂಕಬೈಲು ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

?ಕಾರ್ಯಕ್ರಮದ ಆರಂಭದಲ್ಲಿ ರತ್ನಾಕರ ಆಳ್ವ ತಲಪಾಡಿ ಪ್ರಾರ್ಥನೆ ಹಾಡಿದರು. ಟ್ರಸ್ಟಿ ಸುಭಾಶ್ಚಂದ್ರ ಕಣ್ವತೀರ್ಥ ಸ್ವಾಗತ ಭಾಷಣ ಮಾಡಿದರು. ಟ್ರಸ್ಟಿ ಕೆ. ತೇಜೋಮಯ ಅವರು ವೇದಿಕೆಯಲ್ಲಿದ್ದ ಅತಿಥಿಗಳಿಗೆ ಗೌರವ ಸಮರ್ಪಿಸಿದರು. ಟ್ರಸ್ಟ್ ಆಡಳಿತಾಧಿಕಾರಿ ಡಾ. ಉದಯ ಕುಮಾರ್ ಇರ್ವತ್ತೂರು ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಯಕ್ಷಗಾನ ಅಕಾಡೆಮಿ ಸದಸ್ಯರೂ ಆಗಿರುವ ಸತೀಶ್ ಅಡಪ ಸಂಕಬೈಲು ಧನ್ಯವಾದ ಸಮರ್ಪಿಸಿದರು.

ಸಭಾ ಕಾರ್ಯಕ್ರಮದ ಮುಕ್ತಾಯದ ಬಳಿಕ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಪ್ರಸಿದ್ಧ ‘ಹೆಬ್ಬೆರಳು’ ಕೃತಿಯನ್ನು ಆಧರಿಸಿದ ‘ಗುರುದಕ್ಷಿಣೆ’ ಪ್ರಸಂಗದ ಆಕರ್ಷಕ ಯಕ್ಷಗಾನ ತಾಳಮದ್ದಳೆ ಜರುಗಿತು. ಖ್ಯಾತ ಕಲಾವಿದರ ಅರ್ಥಗಾರಿಕೆ ಮತ್ತು ಸಾಹಿತ್ಯಿಕ ಸಂವಾದಗಳು ನೆರೆದಿದ್ದ ಸಾಹಿತ್ಯ-ಕಲಾ ರಸಿಕರ ಮೆಚ್ಚುಗೆಗೆ ಪಾತ್ರವಾದವು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries