ಬದಿಯಡ್ಕ: ಕೇಂದ್ರ ಸರ್ಕಾರದ ಫಲಾನುಭವಿಗಳ ಸಭೆ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನಾಚರಣೆ ಪ್ರಯುಕ್ತ ದೀಪಪ್ರಜ್ವಲನೆ ಕಾರ್ಯಕ್ರಮ ಗುರುವಾರ ಬದಿಯಡ್ಕ ಗ್ರಾಮ ಪಂಚಾಯಿತಿ ಸಿಡಿಎಸ್ ಹಾಲ್‍ನಲ್ಲಿ ಜರಗಿತು. ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ನಿವೃತ್ತ ಪ್ರಾಂಶುಪಾಲ ನಾರಾಯಣ ಭಟ್ ಮೈರ್ಕಳ ದೀಪಪ್ರಜ್ವಲನೆಗೈದು ಮಾತನಾಡಿ, ಕೇಂದ್ರ ಸರ್ಕಾರದ ವಿವಿಧ ಜನಪರ ಯೋಜನೆಗಳು ಸಮಾಜದ ವಿವಿಧ ವರ್ಗಗಳ ಜನರಿಗೆ ನೆರವಾಗುತ್ತಿದ್ದು, ಅರ್ಹ ಫಲಾನುಭವಿಗಳು ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಉದ್ಘಾಟಿಸಿ ಮಾತನಾಡಿದರು. ಯುಪಿಐ, ಆಧಾರ್ ಸಂಪರ್ಕ, ಮತ್ತು ಜನಧನ್ ಖಾತೆಗಳ ಮೂಲಕ ದೇಶದ ಆರ್ಥಿಕತೆಯನ್ನು ಡಿಜಿಟಲೀಕರಣಗೊಳಿಸಿದ್ದು ಅತ್ಯಂತ ಯಶಸ್ವಿ ಹೆಜ್ಜೆ. ವಂದೇ ಭಾರತ್ ರೈಲುಗಳು, ರಾಷ್ಟ್ರೀಯ ಹೆದ್ದಾರಿಗಳ ಜಾಲದ ವಿಸ್ತರಣೆ ಮತ್ತು ವಿಮಾನ ನಿಲ್ದಾಣಗಳ ಅಭಿವೃದ್ಧಿ, ಸ್ವಚ್ಛ ಭಾರತ ಅಭಿಯಾನ, ಪ್ರಧಾನಮಂತ್ರಿ ಆವಾಸ್ ಯೋಜನೆ, ಉಜ್ವಲ ಯೋಜನೆ ಮತ್ತು ಜಲ ಜೀವನ್ ಮಿಷನ್ ಮೊದಲಾದ ಯೋಜನೆಗಳು ದೇಶದ ಎಲ್ಲಾ ಜನರಿಗೂ ನೀಡಿದ ಕೊಡುಗೆಯಾಗಿದೆ ಎಂದರು. ಬದಿಯಡ್ಕ ಗ್ರಾಮ ಪಂಚಾಯಿತಿ ಕ್ಷೇಮಕಾರ್ಯ ಸ್ಥಾಯಿಸಮಿತಿ ಅಧ್ಯಕ್ಷೆ ರಜನಿ ಸಂದೀಪ್ ಅಧ್ಯಕ್ಷತೆ ವಹಿಸಿದ್ದರು. ಅರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿಸಮಿತಿ ಅಧ್ಯಕ್ಷ ಅವಿನಾಶ್ ರೈ, ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ರಾಮಪ್ಪ ಮಂಜೇಶ್ವರ, ಬ್ಲಾಕ್ ಪಂಚಾಯಿತಿ ಸದಸ್ಯ ಮಹೇಶ್ ವಳಕ್ಕುಂಜ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಹರೀಶ ಕೆ., ಶ್ಯಾಮಪ್ರಸಾದ ಸರಳಿ, ಉಷಾ ಪಳ್ಳತ್ತಡ್ಕ, ಸಿಡಿಎಸ್ ಅಧ್ಯಕ್ಷೆ ಸುಲೋಚನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಚಾಯಿತಿ ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ ಕೆ.ಸ್ವಾಗತಿಸಿ, ಮಧುಸೂದನ ಕಂಗಿಲ ವಂದಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆ ಪ್ರಯುಕ್ತ ಸಿಹಿತಿಂಡಿಯನ್ನು ಹಂಚಲಾಯಿತು.

.jpg)
