ಕುಂಬಳೆ: ಕಿದೂರು ದೇವಾಲಯಕ್ಕೆ ಸಮೀಪದ ನಿರ್ಜನ ಪ್ರದೇಶದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇವರಿಂದ ಜೂಜಿಗೆ ಬಳಸಿದ್ದೆನ್ನಲಾದ 1030ರೂ. ನಗದು ಹಾಗೂ ಮೂರು ಎರಡು ಅಂಕದ ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆ.
ಬೇಳ ಚೌಕಾರು ನಿವಾಸಿ ಅಕ್ಷಯ್ (34), ಕಿದೂರು ಶಾಲಾ ಪರಿಸರದ ಜನಾರ್ದನ (35) ಹಾಗೂ ಮೀಯಪದವು ಅಡ್ಕದಗುರಿ ನಿವಾಸಿ ಗಂಗಾಧರ ಮೂಲ್ಯ (63) ಬಂಧಿತರು. ನಂತರ ಇವರನ್ನು ನೋಟೀಸು ನೀಡಿ ಬಿಡುಗಡೆಗೊಳಿಸಲಾಯಿತು.
ಕಿದೂರಿನಲ್ಲಿ ಜೂಜಾಟದೊಂದಿಗೆ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಕುಂಬಳೆ ಠಾಣಾಧಿಕಾರಿ ಕೆ. ಪಿ. ಗಣೇಶನ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಕೋಳಿ ಅಂಕ ನಡೆಯುವಲ್ಲಿ 50 ಕ್ಕೂ ಹೆಚ್ಚು ಮಂದಿ ಜಮಾಯಿಸಿದ್ದು,ಪೊಲೀಸರನ್ನು ಕಂಡುಳಿದವರು ಓಡಿ ಪರಾರಿಯಾಗಿದ್ದಾರೆ.

