ಲಖನೌ: ಉತ್ತರ ಪ್ರದೇಶದ ಪ್ರಯಾಗರಾಜ್‌ನ ಡಾ.ರಾಜೇಂದ್ರ ಪ್ರಸಾದ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾದ ಜಾತಿ ತಾರತಮ್ಯ ಆರೋಪದ ಕುರಿತು ತನಿಖೆಗೆ ಅಲಹಾಬಾದ್ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.
ದೂರುದಾರ ವಿದ್ಯಾರ್ಥಿಯ ಉತ್ತರ ಪತ್ರಿಕೆಯ ಮರು ಮೌಲ್ಯಮಾಪನಕ್ಕೂ ಕೋರ್ಟ್ ಸೂಚಿಸಿದೆ.
ವಿದ್ಯಾರ್ಥಿ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿನೋದ್ ದಿವಾಕರ್ ಅವರ ಪೀಠ ವಿಚಾರಣೆ ನಡೆಸಿತು.
ಜಾತಿಯ ಕಾರಣಕ್ಕೆ ನನ್ನ ಉತ್ತರ ಪತ್ರಿಕೆಯನ್ನು ಅತ್ಯಂತ ಬಿಗಿಯಾದ ಮೌಲ್ಯಮಾಪನಕ್ಕೆ ಒಳಪಡಿಸಲಾಗಿದೆ ಎಂದು ಬಿಎ ಎಲ್‌ಎಲ್‌ಬಿ ವಿದ್ಯಾರ್ಥಿಯೊಬ್ಬರು ಆರೋಪಿಸಿದ್ದರು.
'ಕಾನೂನು ವಿಭಾಗದ ಮುಖ್ಯಸ್ಥರು ಮತ್ತು ಹಾಸ್ಟೆಲ್ ವಾರ್ಡನ್ ತಮ್ಮ ಆಡಳಿತಾಧಿಕಾರ ಬಳಸಿಕೊಂಡು ಜಾತಿ ಕಿರುಕುಳ ನೀಡುತ್ತಿದ್ದು, ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕುಲಪತಿಗೆ ದೂರು ಕೊಟ್ಟರೂ ಕ್ರಮ ಜರುಗಿಸಿಲ್ಲ' ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.
'ನಾಲ್ಕನೇ ಸೆಮಿಸ್ಟರ್‌ನ ಸಾಂವಿಧಾನಿಕ ಕಾನೂನು-1 ವಿಷಯದಲ್ಲಿ ನಾನು ಹೆಚ್ಚು ಅಂಕ ಗಳಿಸಿದ್ದೆ. ಮೇಲ್ಜಾತಿಗೆ ಸೇರಿದ ಅಧಿಕಾರಿ 'ಆತ ನನ್ನ ಪತ್ರಿಕೆಯಲ್ಲಿ ಅಷ್ಟೇ ಅಂಕ ಗಳಿಸಲಿ ನೋಡುತ್ತೇನೆ' ಎಂದಿದ್ದರು. ಹೀಗಾಗಿ ಕಠಿಣ ಮೌಲ್ಯಮಾಪನ ಮಾಡಲಾಗಿದೆ' ಎಂದು ವಿದ್ಯಾರ್ಥಿ ಆರೋಪಿಸಿದ್ದರು.
ಐದನೇ ಸೆಮಿಸ್ಟರ್‌ನಲ್ಲಿ ದೂರುದಾರರ ಉತ್ತರ ಪತ್ರಿಕೆಯ ಮರು ಮೌಲ್ಯಮಾಪನಕ್ಕೆ ಸ್ವತಂತ್ರ ಸಮಿತಿ ರಚಿಸಲು ನ್ಯಾಯಾಲಯ ಕುಲಪತಿಗೆ ಸೂಚಿಸಿತು.

