ನವದೆಹಲಿ (PTI): ಉಪ ಮುಖ್ಯ ಕಾರ್ಮಿಕ ಆಯುಕ್ತರ ಜೊತೆಗಿನ ಮಾತುಕತೆಯು ಪೂರ್ಣಗೊಳ್ಳದ ಕಾರಣಕ್ಕೆ ಸೆಪ್ಟೆಂಬರ್ 28ರಿಂದ ಮೂರು ದಿನ ನಡೆಯಲಿರುವ ಬ್ಯಾಂಕ್ ಮುಷ್ಕರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಯುಎಫ್‌ಬಿಯು ಮಂಗಳವಾರ ಹೇಳಿದೆ.
'ಐದು ದಿನಗಳ ಕೆಲಸದ ಪದ್ಧತಿಯನ್ನು ಜಾರಿಗೆ ತರಬೇಕು ಎಂದು ನಾವು ಮಂಡಿಸಿರುವ ಬೇಡಿಕೆಗೆ ಪೂರಕವಾದ ಬೆಳಣಿಗೆ ಇದ್ದರೆ, ಒಕ್ಕೂಟವು ಅದನ್ನು ಪರಿಗಣಿಸಲಿದೆ ಎಂಬುದನ್ನು ನಾವು ಭಾರತೀಯ ಬ್ಯಾಂಕ್‌ಗಳ ಸಂಘಟನೆಗೆ (ಐಬಿಎ), ಕೇಂದ್ರ ಹಣಕಾಸು ಸೇವೆಗಳ ಇಲಾಖೆಗೆ ತಿಳಿಸಿದ್ದೇವೆ' ಎಂದು ಯುಎಫ್‌ಬಿಯು ಪ್ರಕಟಣೆ ತಿಳಿಸಿದೆ.
ಬ್ಯಾಂಕ್ ನೌಕರರ ಒಳಿತಿಗಾಗಿ ಕೇಂದ್ರವು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಐದು ದಿನಗಳ ಕೆಲಸದ ಪದ್ಧತಿಯ ವಿಚಾರವು ಪರಿಗಣನೆಯಲ್ಲಿ ಇದೆ. ಈ ವಿಚಾರವಾಗಿ ತೀರ್ಮಾನ ತೆಗೆದುಕೊಳ್ಳುವ ಮೊದಲು ಸಂಬಂಧಪಟ್ಟ ಇತರ ಹಲವರ ಅಭಿಪ್ರಾಯ ಪಡೆಯಬೇಕಾಗುತ್ತದೆ ಎಂದು ಇಲಾಖೆಯ ಪ್ರತಿನಿಧಿಗಳು ನೌಕರರ ಪ್ರತಿನಿಧಿಗಳಿಗೆ ತಿಳಿಸಿದರು.
ಪಿಂಚಣಿಯಲ್ಲಿ ಹೆಚ್ಚಳ, ಎಲ್ಲ ಪಿಂಚಣಿದಾರರಿಗೆ ಸಮಾನವಾಗಿ ಅನ್ವಯವಾಗುವ ತುಟ್ಟಿಭತ್ಯೆ ಸೂತ್ರ, ಎನ್‌ಪಿಎಸ್ ವ್ಯಾಪ್ತಿಯಲ್ಲಿ ಇರುವ ನೌಕರರಿಗೆ ಒಪಿಎಸ್‌ಗೆ ವರ್ಗಾವಣೆ ಆಗಲು ಅವಕಾಶ ಕಲ್ಪಿಸಬೇಕು ಎಂಬುದು ಯುಎಫ್‌ಬಿಯು ಮುಂದಿರಿಸಿರುವ ಇತರ ಬೇಡಿಕೆಗಳು.
ಮುಷ್ಕರ ನಡೆದಲ್ಲಿ ಗ್ರಾಹಕರು ಮೊಬೈಲ್ ಬ್ಯಾಂಕಿಂಗ್, ಎಟಿಎಂ, ಇಂಟರ್ನೆಟ್ ಬ್ಯಾಂಕಿಂಗ್, ಯುಪಿಐ ಸೇವೆಗಳನ್ನು ಬಳಸಬೇಕು ಎಂದು ಸರ್ಕಾರಿ ಸ್ವಾಮ್ಯದ ಹಲವು ಬ್ಯಾಂಕ್‌ಗಳು ಗ್ರಾಹಕರಿಗೆ ಸಲಹೆ ನೀಡಿವೆ.

