ಲಖನೌ: ಗೋರಖಪುರದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಅಖಿಲ ಭಾರತ ವಿದ್ಯಾರ್ಥಿಗಳ ಒಕ್ಕೂಟದ(ಎಐಎಸ್‌ಎ) ಅಧ್ಯಕ್ಷೆ ನೇಹಾ ಬೋರಾ ಅವರ ವಿರುದ್ಧ ಮೂರು ದೂರುಗಳನ್ನು ದಾಖಲಿಸಲಾಗಿದೆ.
ನೇಹಾ ಅವರ ಭಾಷಣದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಬಳಿಕ ಮಂಗಳವಾರ ಮತ್ತು ಬುಧವಾರ, ಬಿಜೆಪಿಯ ಕೆಲವು ನಾಯಕರು ಹಾಗೂ ಕೆಲವು ಸಂಘಟನೆಗಳು ಪಿಪಿಗಂಜ್ ಪೊಲೀಸ್ ಠಾಣೆಯಲ್ಲಿ ಈ ದೂರುಗಳನ್ನು ದಾಖಲಿಸಿದ್ದಾರೆ.
ಗೂಂಡಾ, ದರೋಡೆಕೋರ ಎಂಬ ಪದಗಳಿಂದ ಮುಖ್ಯಮಂತ್ರಿಗಳನ್ನು ನಿಂದಿಸಿರುವುದಲ್ಲದೇ, ಉತ್ತರ ಪ್ರದೇಶವನ್ನು ಕಾನೂನು ಸುವ್ಯವಸ್ಥೆ ಇಲ್ಲದ ರಾಜ್ಯವನ್ನಾಗಿ ಯೋಗಿ ಪರಿವರ್ತಿಸಿದ್ದಾರೆ ಎಂದೂ ನೇಹಾ ದೂರಿದ್ದಾರೆ. ನೇಹಾ ಅವರ ಹೇಳಿಕೆಯಿಂದ ಜನರ ಭಾವನೆಗೆ ಧಕ್ಕೆಯಾಗಿದೆ. ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದೂ ದೂರುದಾರರು ಆಗ್ರಹಿಸಿದ್ದಾರೆ.

