ಕುಂಬಳೆ: ಜನರ ಜೀವ ಸಂರಕ್ಷಿಸಬೇಕೆಂದು ಒತ್ತಾಯಿಸಿ ಜನಪ್ರತಿನಿಧಿಗಳು ಮೊಗ್ರಾಲ್ ಪುತ್ತೂರು ಪಂಚಾಯತಿ ಕಚೇರಿ ಮುಂದೆ ಮಂಗಳವಾರ ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸಿದರು. ಪಂಚಾಯತಿಯ ಬಿಜೆಪಿ ಸದಸ್ಯೆಯರಾದ ಶ್ರೀವಿದ್ಯಾ, ವಸಂತಿ, ಮಲ್ಲಿಕ, ಪ್ರಮೀಳ ಎಂಬವರು ಉಪವಾಸ ಸತ್ಯಾಗ್ರಹ ನಡೆಸಿದರು.
ಪಂಚಾಯತಿ ವ್ಯಾಪ್ತಿಯಲ್ಲಿ ಅಲೆದಾಡುತ್ತಿರುವ ಹುಚ್ಚು ನಾಯಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ವಿವಿಧೆಡೆ ಅಲೆದಾಡುತ್ತಿರುವ ಜಾನುವಾರುಗಳನ್ನು ಪಂಚಾಯತಿಯ ದೊಡ್ಡಿಯಲ್ಲಿ ಕಟ್ಟಿಹಾಕಬೇಕು, ಪಂಚಾಯತಿ ವ್ಯಾಪ್ತಿಯಲ್ಲಿ ಹುಚ್ಚು ನಾಯಿಗಳು ಹಾಗೂ ಜಾನುವಾರುಗಳ ಉಪಟಳ ಕುರಿತು ಧ್ವನಿವರ್ಧಕ ಮೂಲಕ ಜನರಿಗೆ ತಿಳಿಸಿ ಜಾಗ್ರತೆ ಮೂಡಿಸಬೇಕು, ಪಂಚಾಯತಿ ಆಡಳಿತ ಸಮಿತಿ ಕೈಗೊಳ್ಳುವ ನಿರ್ಧಾರಗಳನ್ನು ಗುಪ್ತವಾಗಿಡುವ ಪಂಚಾಯತಿ ಕಾರ್ಯದರ್ಶಿಯನ್ನು ನಿಯಂತ್ರಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ಸತ್ಯಾಗ್ರಹ ನಡೆಸಲಾಯಿತು. ಜನರು ಜಾಗ್ರತೆ ಪಾಲಿಸುವಂತೆ ಧ್ವನಿವರ್ಧಕ ಮೂಲಕ ಘೋಷಣೆ ಆರಂಭಿಸುವ ವರೆಗೆ ಸತ್ಯಾಗ್ರಹ ಮುಂದುವರಿಸುವುದಾಗಿ ಚಳವಳಿ ನಿರತರು ತಿಳಿಸಿದ್ದಾರೆ. ಪಂಚಾಯತಿ ವ್ಯಾಪ್ತಿಯಲ್ಲಿ ಅಲೆದಾಡುತ್ತಿರುವ ಹುಚ್ಚುನಾಯಿಗಳ ಕಡಿತಕ್ಕೊಳಗಾಗಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸತ್ಯಾಗ್ರಹ ನಿರತರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜನರ ಸುರಕ್ಷತೆಯನ್ನು ಖಚಿತಪಡಿಸಲು ಪಂಚಾಯತಿಯ ಭಾಗದಿಂದ ತುರ್ತು ಕ್ರಮ ಕೈಗೊಂಡು ಶೀಘ್ರ ತಿಳುವಳಿಕೆ ಕಾರ್ಯಕ್ರಮ ನಡೆಸುವಂತೆ ಚಳವಳಿ ನಿರತರು ಒತ್ತಾಯಿಸಿದ್ದಾರೆ.

.jpg)
.jpg)
