ಉಪ್ಪಳ: ಬಂದ್ಯೋಡಿನಲ್ಲಿ ವ್ಯಾಪಾರಿಯನ್ನು ತಡೆದು ನಿಲ್ಲಿಸಿ ಹಲ್ಲೆಗೈದ ಬಳಿಕ, ವ್ಯಾಪಾರಿಯ ಕಾರನ್ನು ಅಪಹರಿಸಿರುವ ಬಗ್ಗೆ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ತಂಡ ನಡೆಸಿದ ಹಲ್ಲೆಯಿಂದ ಬಂದ್ಯೋಡು ಮಲ್ಲಂಗೈ ನಿವಾಸಿ, ಬಂದ್ಯೋಡು ಹಾಗೂ ಮಂಗಳೂರಿನಲ್ಲಿ ವ್ಯಾಪಾರ ಸಂಸ್ಥೆ ಹೊಂದಿರುವ ಅಲಿ ಮುಕ್ತಾರ್ (34)ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಸೋಮವಾರ ಸಂಜೆ ಬಂದ್ಯೋಡು ಅಡ್ಕ ಗುರ್ಮೆ ಸಾರ್ವಜನಿಕ ಸ್ಮಶಾನ ಸನಿಹ ಘಟನೆ ನಡೆದಿದೆ. ಅಲಿ ಮುಕ್ತಾರ್ ಬಂದ್ಯೋಡಿನಿಂದ ಮನೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ಹಾದಿ ಮಧ್ಯೆ ಕಾರಿಗೆ ತಡೆಯೊಡ್ಡಿದ ಮೂರು ಮಂದಿಯ ತಂಡ, 50 ಸಾವಿರ ರೂಪಾಯಿಗಾಗಿ ಬೇಡಿಕೆಯಿರಿಸಿದೆ. ಆದರೆ ಹಣ ನೀಡಲು ಅಲಿ ಮುಕ್ತಾರ್ ಸಿದ್ಧರಾಗದಿರುವುದರಿಂದ ಅವರನ್ನು ಕಾರಿನಿಂದ ಎಳೆದು ಹಾಕಿ ಹಲ್ಲೆಗೈದು ಬಳಿಕ ತಂಡ ಅವರ ಐಫೋನ್ ಕಸಿದು ಅವರದೇ ಕಾರಿನಲ್ಲಿ ಪರಾರಿಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ಶಂಸೀರ್, ಅಯಾಸ್ ಸೇರಿದಂತೆ ಮೂರು ಮಂದಿ ಕೃತ್ಯವೆಸಗಿರುವುದಾಗಿ ಆಲಿಮುಕ್ತಾರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.


