ನವದೆಹಲಿ: ಟಕೆಡಾ ಫಾರ್ಮಾಸ್ಯುಟಿಕಲ್ಸ್ ಕಂಪೆನಿಯು ಅಭಿವೃದ್ಧಿಪಡಿಸಿರುವ ಭಾರತದ ಮೊದಲ ಡೆಂಗ್ಯೂ ನಿರೋಧಕ ಲಸಿಕೆ 'ಕ್ಯುಡೆಂಗಾ'ವನ್ನು ಹೈದರಾಬಾದ್‌ನ ಡಾ.ರೆಡ್ಡೀಸ್ ಲ್ಯಾಬರೇಟರೀಸ್ ದೇಶದ ಖಾಸಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಿದೆ.
'ಕ್ಯುಡೆಂಗಾ'ವನ್ನು ಮಕ್ಕಳು ಮತ್ತು ವಯಸ್ಕರ ಲಸಿಕೀಕರಣಕ್ಕಾಗಿ ಬಳಸಲಾಗುತ್ತದೆ ಎಂದು ಕಂಪೆನಿಗಳು ಶುಕ್ರವಾರ ಪ್ರಕಟಿಸಿವೆ.
ಈ ಲಸಿಕೆಯು 2027ರ ಮೊದಲಾರ್ಧದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಅವು ತಿಳಿಸಿವೆ. ಲಸಿಕೆಯ ಬೆಲೆಯನ್ನು ಇನ್ನೂ ನಿರ್ಧರಿಸಲಾಗಿಲ್ಲ.
''ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಅನುಮೋದನೆಯನ್ನು ಜುಲೈ ತಿಂಗಳಲ್ಲಿ ನೀಡಲಾಗಿದೆ. ಆದ್ದರಿಂದ, ವಾಣಿಜ್ಯಿ ವಿತರಣೆ ಪ್ರಾರಂಭವಾಗುವ ಮೊದಲು ಅಗತ್ಯವಿರುವ ಸ್ಥಳೀಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು ಸದ್ಯದ ಆದ್ಯತೆಯಾಗಿದೆ. ಉಳಿದ ಪ್ರಕ್ರಿಯೆಗಳು ಮುಗಿಯುವ ಮುನ್ನ ಬೆಲೆಯ ಬಗ್ಗೆ ಊಹಾಪೋಹ ಮಾಡುವುದು ಅಕಾಲಿಕವಾಗುತ್ತದೆ'' ಎಂದು ಟಕೆಡಾದ ಅಂತರ್‌ಖಂಡ ಮಾರುಕಟ್ಟೆ ಮುಖ್ಯಸ್ಥ ಮಹೇಂದರ್ ನಾಯಕ್ ಹೇಳಿದರು.
ಭಾರತದ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು, ನಾಲ್ಕರಿಂದ 60 ವರ್ಷ ವಯಸ್ಸಿನವರಿಗೆ ಕ್ಯುಡೆಂಗಾ ಲಸಿಕೆಯನ್ನು ಬಳಸಲು ಮಾರುಕಟ್ಟೆ ಅನುಮೋದನೆ ನೀಡಿದೆ.

