ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ದ್ವಾರದ ಸಮೀಪ ಚರಂಡಿಯ ಅವ್ಯವಸ್ಥೆಯಿಂದ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿರುವುದಾಗಿ ದೂರಲಾಗಿದೆ. ಚರಂಡಿಗೆ ಪೂರ್ಣವಾಗಿ ಕಬ್ಬಿಣದ ಸರಳು ಅಳವಡಿಸದ ಹಿನ್ನೆಲೆಯಲ್ಲಿ ಈಗಾಗಲೇ ಹಲವರು ಕಾಲು ಸಿಲುಕಿ ಗಾಯಗೊಂಡಿದ್ದಾರೆ. ಬುಧವಾರ ಬೆಳಿಗ್ಗೆ ಡಿಸಿಸಿ ಕಾರ್ಯದರ್ಶಿಯೂ, ತಾಲೂಕು ಅಭಿವೃದ್ಧಿ ಸಮಿತಿಯ ಸದಸ್ಯನಾದ ಲಕ್ಷ್ಮಣ ಪ್ರಭು (48) ಅವರ ಕಾಲು ಚರಂಡಿಯಲ್ಲಿ ಸಿಲುಕಿ ಗಾಯಗೊಂಡಿದ್ದಾರೆ. ಬಳಿಕ ಇವರಿಗೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
ಕಾರು ನಿಲ್ಲಿಸಿ ಇಳಿದು ಮುಂದೆ ಸಾಗುತ್ತಿದ್ದಂತೆ ಕಾಲು ಚರಂಡಿಯಲ್ಲಿ ಸಿಲುಕಿಕೊಂಡಿದೆ. ಚರಂಡಿ ನಿರ್ಮಾಣದಲ್ಲಿ ಪಂಚಾಯತ್‍ಗೆ ಲೋಪವುಂಟಾಗಿದೆಯೆಂದು ತಿಳಿಸಿ ಈ ಹಿಂದೆ ತಾಲೂಕು ಅಭಿವೃದ್ಧಿ ಸಮಿತಿಗೆ ಲಕ್ಷ್ಮಣ ಪ್ರಭು ದೂರು ನೀಡಿದ್ದರು. ಆದರೆ ಇದುವರೆಗೆ ಚರಂಡಿ ದುರಸ್ತಿ ಯನ್ನು ಸಮರ್ಪಕಗೊಳಿಸಲು ಸಂಬಂಧಪಟ್ಟವರು ಮುಂದಾಗಿಲ್ಲ. ಇದು ಪಾದಚಾರಿಗಳ ಸಹಿತ ಸಾರ್ವಜನಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆಯೆಂದು ದೂರಲಾಗಿದೆ.

.jpg)
