ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿ ನಗರದಲ್ಲಿ ರಸ್ತೆ ವಿಸ್ತರಣೆಯ ಯೋಜನೆಗೆ ಮುಸ್ಲಿಂ ಸಮುದಾಯ ಬೆಂಬಲ ನೀಡುತ್ತಿದ್ದು, ಇಲ್ಲಿನ ಐತಿಹಾಸಿಕ ಶಾಹಿ ಮಸೀದಿಯ ನಿರ್ದಿಷ್ಟ ಭಾಗವನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸುವ ಕಾರ್ಯ ಮಂಗಳವಾರವೂ ಮುಂದುವರಿಯಲಿದೆ ಎಂದು ಮಸೀದಿ ಸಮಿತಿಯ ಸದಸ್ಯರು ತಿಳಿಸಿದ್ದಾರೆ.
2028ರ ಸಿಂಹಸ್ಥ ಕುಂಭಮೇಳದ ಯೋಜನೆಯ ಹಿನ್ನೆಲೆಯಲ್ಲಿ ರಸ್ತೆ ವಿಸ್ತರಣೆಯ ಕಾರ್ಯ ನಡೆಯುತ್ತಿದೆ. ಕಂಠಾಲ್ ಕ್ರಾಸಿಂಗ್‌ನಿಂದ ಗೋಪಾಲ್ ಮಂದಿರದವರೆಗಿನ ರಸ್ತೆಯನ್ನು 15 ಮೀಟರ್‌ಗೆ ವಿಸ್ತರಿಸಲಾಗುತ್ತಿದೆ.
ಸ್ಥಳೀಯ ಆಡಳಿತ, ಶಹರ್ ಖಾಜಿ ಹಾಗೂ ಸಮಿತಿಯ ಮುಖಂಡರ ನಡುವೆ ನಡೆದ ಸಮಾಲೋಚನೆ ಬಳಿಕ ಕಾಮಗಾರಿಯನ್ನು ಶಾಂತಿಯುತವಾಗಿ ಕೈಗೊಳ್ಳಲು ಒಮ್ಮತಕ್ಕೆ ಬರಲಾಗಿದೆ ಎಂದು ನುಮೈಂದಾ ಸಮಿತಿ ಸದಸ್ಯ ಫಹೀಮ್ ಸಿಕಂದರ್ ತಿಳಿಸಿದ್ದಾರೆ.
'ಮಸೀದಿಯ ಒಂದು ಭಾಗವನ್ನು ತೆರವುಗೊಳಿಸುವ ನಿರ್ಧಾರವು ಎಲ್ಲರಿಗೂ ತಲುಪದ ಕಾರಣ ಕೆಲಕಾಲ ಗೊಂದಲ ಮತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದಾಗಿ ಸೋಮವಾರ ಕಲ್ಲು ತೂರಾಟದ ಘಟನೆಯೂ ನಡೆದಿತ್ತು' ಎಂದು ಅವರು ವಿವರಿಸಿದ್ದಾರೆ.

ಉಜ್ಜಯಿನಿ: ಉದ್ವಿಗ್ನ ಸ್ಥಿತಿ
'ಮುಸ್ಲಿಂ ಸಮುದಾಯವು ರಸ್ತೆ ಅಭಿವೃದ್ಧಿ ಯೋಜನೆಯನ್ನು ಗೌರವಿಸುತ್ತದೆ. ಮೊದಲು ಧಾರ್ಮಿಕ ಸ್ಥಳಕ್ಕೆ ಧಕ್ಕೆಯಾಗದಂತೆ ರಕ್ಷಿಸಲು ಸಮಿತಿ ಪ್ರಯತ್ನಿಸಿತಾದರೂ, ರಸ್ತೆ ವಿಸ್ತರಣೆಗೆ ಅಡ್ಡಿಯಾಗುವ ಭಾಗವನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತೆರವುಗೊಳಿಸಲು ಸಮ್ಮತಿಸಲಾಯಿತು' ಎಂದು ತಿಳಿಸಿದ್ದಾರೆ.
'ಮಸೀದಿಯ ಮೂರರಿಂದ ಎಂಟು ಅಡಿಯಷ್ಟು ಗೋಡೆಯನ್ನು ತೆರವುಗೊಳಿಸುವ ಕುರಿತು ಚರ್ಚೆಗಳು ನಡೆಯುತ್ತಿದ್ದು, ಎಷ್ಟು ಭಾಗವನ್ನು ತೆರವು ಮಾಡಬೇಕೆಂಬ ಬಗ್ಗೆ ಅಂತಿಮ ತೀರ್ಮಾನ ಇನ್ನಷ್ಟೇ ಹೊರಬೀಳಬೇಕಿದೆ. ಈ ಕಾರ್ಯ ಪೂರ್ಣಗೊಳ್ಳಲು 7 ರಿಂದ 8 ದಿನಗಳು ಬೇಕಾಗಬಹುದು. ಮಂಗಳವಾರ ಬೆಳಿಗ್ಗೆಯಿಂದ ಮತ್ತೆ ಕಾಮಗಾರಿ ಆರಂಭವಾಗಲಿದ್ದು, ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುವುದು' ಎಂದು ಅವರು ಹೇಳಿದ್ದಾರೆ.
ಸೋಮವಾರ ಮಸೀದಿ ತೆರವು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಗುಂಪು ಕಲ್ಲು ತೂರಾಟ ನಡೆಸಿದಾಗ, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದರು.

