HEALTH TIPS

‘ಪ್ರಜಾಪ್ರಭುತ್ವದ ಕರಾಳ ದಿನ, ತಲೆ ಬಾಗಲ್ಲ, ಯಾರಿಗೂ ಶರಣಾಗಲ್ಲ': ಮಮತಾ ಬ್ಯಾನರ್ಜಿ ಕೆಂಡಾಮಂಡಲ

 ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಕುರಿತು ಮಾಜಿ ಸಿಎಂ ಮಮತಾ ಬ್ಯಾನರ್ಜಿ ಕೆಂಡಾಮಂಡಲವಾಗಿದ್ದು, ಪ್ರಜಾಪ್ರಭುತ್ವದ ಕರಾಳ ದಿನ ಎಂದು ಕರೆದಿದ್ದಾರೆ.


ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಬಿನ್ನಮತದ ಬೆನ್ನಲ್ಲೇ ಬಂಡಾಯ ಸ್ಫೋಟವಾಗಿ ಬಣ ರಾಜಕೀಯ ನಡೆಯುತ್ತಿರುವಂತೆಯೇ ಇತ್ತ ಚುನಾವಣಾ ಆಯೋಗ ಮಮತಾ ಬ್ಯಾನರ್ಜಿಗೆ ಶಾಕ್ ನೀಡಿತ್ತು.

ತೃಣಮೂಲ ಕಾಂಗ್ರೆಸ್‌ನ ಸಾಂಪ್ರದಾಯಿಕ ‘ಜೋಡಾ ಘಾಸ್ ಫುಲ್’ (ಎರಡು ಹೂವು ಮತ್ತು ಹುಲ್ಲು) ಚಿಹ್ನೆಯನ್ನು ಚುನಾವಣಾ ಆಯೋಗ ಫ್ರೀಜ್ ಮಾಡಿ ಎರಡು ಬಣಗಳಿಗೆ ಪ್ರತ್ಯೇಕ ಹೆಸರು ಮತ್ತು ಚುನಾವಣಾ ಚಿಹ್ನೆಗಳನ್ನು ನೀಡಿದೆ.

ಶುಕ್ರವಾರ ಚುನಾವಣಾ ಆಯೋಗವು ಅಕ್ಟೋಬರ್ 6ರಂದು ನಡೆಯಲಿರುವ ಉಪಚುನಾವಣೆಗಳ ಹಿನ್ನೆಲೆಯಲ್ಲಿ ಮಮತಾ ನೇತೃತ್ವದ ಬಣಕ್ಕೆ ‘ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್’ ಎಂಬ ಹೆಸರು ಹಾಗೂ ‘ಫುಟ್ಬಾಲ್ ಆಟಗಾರ’ ಚಿಹ್ನೆ ನೀಡಿದೆ.

ಇನ್ನೊಂದೆಡೆ, ಅರೂಪ್ ರಾಯ್ ನೇತೃತ್ವದ ಬಣಕ್ಕೆ ‘ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್’ ಎಂಬ ಹೆಸರು ಮತ್ತು ‘ಲಕೋಟೆ’ ಚಿಹ್ನೆ ನೀಡಲಾಗಿದೆ.

ಟಿಎಂಸಿಯ ಹೆಸರು ಮತ್ತು ಚುನಾವಣಾ ಚಿಹ್ನೆಯ ಹಕ್ಕು ಕುರಿತು ಎರಡೂ ಬಣಗಳ ನಡುವೆ ನಡೆಯುತ್ತಿರುವ ತೀವ್ರ ವಿವಾದದ ನಡುವೆಯೇ ಚುನಾವಣಾ ಆಯೋಗ ಈ ಮಧ್ಯಂತರ ನಿರ್ಧಾರ ಕೈಗೊಂಡಿದೆ.

ಇದರ ಬೆನ್ನಲ್ಲೇ ಟಿಎಂಸಿಯ ಸಾಂಪ್ರದಾಯಿಕ ‘ಜೋಡಾ ಘಾಸ್ ಫುಲ್’ (ಎರಡು ಹೂವು ಮತ್ತು ಹುಲ್ಲು) ಚಿಹ್ನೆಯನ್ನು ಚುನಾವಣಾ ಆಯೋಗ ಫ್ರೀಜ್ ಮಾಡಿರುವುದನ್ನು ಪ್ರಶ್ನಿಸಿದ ಮಮತಾ, 'ಈ ಚಿಹ್ನೆ ಕಳೆದ 28 ವರ್ಷಗಳಿಂದ ಪಕ್ಷದೊಂದಿಗೆ ಗುರುತಿಸಿಕೊಂಡಿದೆ' ಎಂದು ಹೇಳಿದರು.

ಪ್ರಜಾಪ್ರಭುತ್ವದ ಕರಾಳ ದಿನ

“ಕಳೆದ 28 ವರ್ಷಗಳಿಂದ ನಮ್ಮೊಂದಿಗೆ ಇರುವ ನನ್ನ ಚಿಹ್ನೆಯನ್ನು ಅವರು ಹೇಗೆ ಫ್ರೀಜ್ ಮಾಡುತ್ತಾರೆ?” ಎಂದು ಮಮತಾ ಪ್ರಶ್ನಿಸಿದ್ದು, ಚುನಾವಣಾ ಆಯೋಗದ ಈ ಕ್ರಮವನ್ನು ‘ಪ್ರಜಾಪ್ರಭುತ್ವದ ಕರಾಳ ದಿನ’ ಎಂದು ಅವರು ಹೇಳಿದ್ದಾರೆ.

‘ವಿರೋಧ ಪಕ್ಷಗಳನ್ನು ನಾಶ ಮಾಡಲು ಬಿಜೆಪಿ ಯತ್ನ’

ಬಿಜೆಪಿ ದೇಶಾದ್ಯಂತ ವಿರೋಧ ಪಕ್ಷಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಮಮತಾ ಆರೋಪಿಸಿದ್ದು, ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲ, ಇತರ ರಾಜ್ಯಗಳಲ್ಲಿಯೂ ಚುನಾವಣೆಗಳನ್ನು ಲೂಟಿ ಮಾಡಿದೆ. ಈಗ ವಿರೋಧ ಪಕ್ಷಗಳನ್ನು ನಾಶ ಮಾಡಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿದ ಮಮತಾ, 'ಮೊದಲು ಅವರು ಉದ್ಧವ್ ಠಾಕ್ರೆ ಅವರ ಪಕ್ಷವನ್ನು ಒಡೆದರು. ನಂತರ ಎನ್‌ಸಿಪಿಯನ್ನು ಒಡೆದರು. ಈಗ ನಮ್ಮ ಹಿಂದೆ ಬಿದ್ದಿದ್ದಾರೆ. ಸುವೇಂದು ಅಧಿಕಾರಿ ಈ ಹಿಂದೆ ಟಿಎಂಸಿಯ ಹೆಸರು ಮತ್ತು ಚಿಹ್ನೆ ಉಳಿಯಲು ಬಿಡುವುದಿಲ್ಲ ಎಂದು ಹೇಳಿದ್ದರು' ಎಂದೂ ಮಮತಾ ಆರೋಪಿಸಿದ್ದಾರೆ.

‘ತಲೆ ಬಾಗುವುದಿಲ್ಲ, ಶರಣಾಗುವುದಿಲ್ಲ’

“ನಾವು ತಲೆ ಬಾಗುವುದಿಲ್ಲ, ಶರಣಾಗುವುದಿಲ್ಲ. ನಾವು ಹೋರಾಡುತ್ತೇವೆ ಮತ್ತು ಮತ್ತೆ ಪುಟಿದೇಳುತ್ತೇವೆ” ಎಂದು ಮಮತಾ ಹೇಳಿದ್ದಾರೆ.

ಇದಕ್ಕೂ ಮುನ್ನ ನಂದಿಗ್ರಾಮದಲ್ಲಿ ರಾಜಕೀಯ ಬೆಳವಣಿಗೆ ನಾಟಕೀಯ ತಿರುವು ಪಡೆದಿತ್ತು. ಮಮತಾ ಬಣದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದ್ದ ಶಿಕ್ಷಕಿ ಸಂಚಿತಾ ಪ್ರಧಾನ ದೇ ಅವರು ನಬಣ್ಣದಲ್ಲಿ ಸುವೇಂದು ಅಧಿಕಾರಿ ಅವರನ್ನು ಭೇಟಿಯಾದ ಬಳಿಕ ತಮ್ಮ ನಾಮಪತ್ರವನ್ನು ಹಿಂಪಡೆದುಕೊಂಡಿದ್ದರು.

ಇದರ ಬೆನ್ನಲ್ಲೇ ನಂದಿಗ್ರಾಮ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಮಮತಾ ಘೋಷಿಸಿದ್ದಾರೆ. ಅಕ್ಟೋಬರ್ 6ರಂದು ನಂದಿಗ್ರಾಮ ಸೇರಿದಂತೆ ಸಂಬಂಧಿತ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries