ಕೋಲ್ಕತ್ತ: ಬರಿಗಣ್ಣಿಗೆ ಕಾಣದ ಅತ್ಯಂತ ಸಣ್ಣ ವಸ್ತುಗಳನ್ನು ಸಾಮಾನ್ಯ ಸ್ಮಾರ್ಟ್‌ಫೋನ್ ಕ್ಯಾಮೆರಾದಲ್ಲಿ ಪತ್ತೆಹಚ್ಚಲು ಸಾಧ್ಯವಾಗುವಂತಹ ಅತ್ಯಂತ ಸೂಕ್ಷ್ಮ ಸಂವೇದಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವುದಾಗಿ ಐಐಟಿ ಖರಗ್‌ಪುರದ ಸಂಶೋಧಕರು ಹೇಳಿದ್ದಾರೆ.
ಇಲಿನಾಯ್ಸ್ ಅರ್ಬಾನಾ ಚಾಂಪೇನ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ಸಹಯೋಗದಲ್ಲಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.
ಇದು ವೈದ್ಯಕೀಯ ಪರೀಕ್ಷೆ ಮತ್ತು ಇತರ ಅಪ್ಲಿಕೇಶನ್‌ಗಳಿಗೆ ಕಡಿಮೆ-ವೆಚ್ಚದಲ್ಲಿ ಪೋರ್ಟಬಲ್ ಸಾಧನಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಎಂದು ಸಂಸ್ಥೆ ಹೇಳಿದೆ.
ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಸಿದರೆ, ಈ ತಂತ್ರಜ್ಞಾನ ಹೆಚ್ಚು ಉಪಯುಕ್ತವಾಗಬಹುದು ಎಂದು ಸಂಶೋಧಕರು ಹೇಳಿದ್ದಾರೆ.
ಐಐಟಿ ಸಂಶೋದಕರು ಅಭಿವೃದ್ಧಿಪಡಿಸಿರುವ ಫೋಟೊನಿಕ್ ಕ್ರಿಸ್ಟಲ್ ಆಧಾರಿತ ವೇದಿಕೆಯು ಬೆಳಕು ಮತ್ತು ವಸ್ತುವಿನ ನಡುವಿನ ಇಂಟರಾಕ್ಷನ್ ಅನ್ನು ಸುಮಾರು 1,300 ಪಟ್ಟು ಹೆಚ್ಚಿಸುತ್ತದೆ. 'ಅಟ್ಟೊಮೋಲಾರ್ ಮಟ್ಟ'ದಲ್ಲಿ ವಸ್ತುಗಳನ್ನು ಪತ್ತೆ ಮಾಡುತ್ತದೆ,
ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯ ಸಂಯೋಜನೆಯ ಈ ತಂತ್ರಜ್ಞಾನವು, ರೋಗನಿರ್ಣಯ ಮತ್ತು ಇತರ ಕ್ಷೇತ್ರಗಳಲ್ಲಿ ಮತ್ತಷ್ಟು ಸಾಧ್ಯತೆಗಳನ್ನು ತೆರೆದಿಡಬಹುದು ಎಂದು ಹೇಳಿಕೆ ತಿಳಿಸಿದೆ.

