ನವದೆಹಲಿ: ರೈಲು ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕನ ಮೃತದೇಹದ ಬಳಿ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಅವರ ಕುಟುಂಬಕ್ಕೆ ಪರಿಹಾರ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ರೈಲು ಪ್ರಯಾಣಿಕರು ಮತ್ತು ಅವರ ಕುಟುಂಬಗಳ ಹಕ್ಕುಗಳನ್ನು ಈ ತೀರ್ಪು ಎತ್ತಿಹಿಡಿದಿದೆ.
ಸಂಬಂಧಿತ ರೈಲ್ವೆ ಕ್ಲೈಮ್ಸ್ ಟ್ರಿಬ್ಯೂನಲ್(ಆರ್‌ಸಿಟಿ) ಮತ್ತು ಮಧ್ಯಪ್ರದೇಶ ಹೈಕೋರ್ಟ್‌ನ ಹಿಂದಿನ ಆದೇಶವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, 2015ರಲ್ಲಿ ರೈಲಿನಿಂದ ಬಿದ್ದು ಮೃತಪಟ್ಟ ವ್ಯಕ್ತಿಯೊಬ್ಬರ ಪತ್ನಿ ಲತಾ ಎಂಬುವವರಿಗೆ ₹8 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ.
ಮಹಿಳೆಯ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್. ಕೋಟಿಸ್ವರ್ ಸಿಂಗ್ ಅವರಿದ್ದ ಪೀಠವು ಈ ಆದೇಶ ನೀಡಿದೆ.
ಅಪಘಾತದಲ್ಲಿ ಮೃತಪಟ್ಟ ಪತಿಯ ಮೃತದೇಹದ ಬಳಿ ಟಿಕೆಟ್ ಪತ್ತೆಯಾಗದ ಕಾರಣ 'ಅಧಿಕೃತ ಪ್ರಯಾಣಿಕ' ಎಂಬುದು ಸಾಬೀತಾಗಿಲ್ಲ ಎಂದಿದ್ದ ಆರ್‌ಸಿಟಿ ಮತ್ತು ಹೈಕೋರ್ಟ್ ಪರಿಹಾರದ ಅರ್ಜಿಯನ್ನು ತಿರಸ್ಕರಿಸಿದ್ದವು.
ರೈಲ್ವೆ ಕಾಯ್ದೆಯು ಜನಕಲ್ಯಾಣದ ಉದ್ದೇಶವನ್ನು ಹೊಂದಿದ್ದು, ಇದಕ್ಕೆ ಉದಾರ ಮತ್ತು ಉದ್ದೇಶ ಆಧಾರಿತ ವ್ಯಾಖ್ಯಾನ ನೀಡಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ಸಂಬಂಧಿತ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಕರೋಲ್, ಯಾವುದೇ ಕಾನೂನನ್ನು ಜಾರಿಗೊಳಿಸುವಾಗ ಅದನ್ನು ಅಕ್ಷರಶಃ ಅಥವಾ ಸಂಕುಚಿತ ಅರ್ಥದಲ್ಲಿ ವ್ಯಾಖ್ಯಾನಿಸುವುದನ್ನು ಬಿಟ್ಟು, ಅದರ ಉದ್ದೇಶಕ್ಕೆ ಪೂರಕವಾದ ಮತ್ತು ಉದಾರ ವ್ಯಾಖ್ಯಾನ ನೀಡಬೇಕು. ಆ ಮೂಲಕ, ಶಾಸನದ ಅಶಯ ಕಾಪಾಡಬೇಕು ಎಂದು ತಿಳಿಸಿದ್ದಾರೆ.
ತಾಂತ್ರಿಕ ದೃಷ್ಟಿಕೋನ, ಕಾರ್ಯವಿಧಾನದ ಲೋಪವು ಕಾಯ್ದೆಯ ಉದ್ದೇಶವನ್ನು ವಿಫಲಗೊಳಿಸಬಾರದು ಎಂದಿದ್ದಾರೆ.

