ಚಂಡೀಗಢ: ಆಪ್ ನೇತೃತ್ವದ ಪಂಜಾಬ್ ಸರಕಾರ ನೌಕರರ ಸಂಘಟನೆಗಳ ಮುಷ್ಕರಿಂದ ಹೈರಾಣಾಗಿರುವ ಬೆನ್ನಲ್ಲೇ ಮತ್ತೊಂದು ಪ್ರಮುಖ ಪ್ರತಿಭಟನೆ ಆರಂಭವಾಗಿದೆ. ಪಂಜಾಬ್‌ನ ಅಖಿಲ ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಬ್ಯಾನರ್ ಅಡಿಯಲ್ಲಿ ಪಂಜಾಬ್ ರೈತರು ಇಂದಿನಿಂದ (ಮಂಗಳವಾರ) ಸೆ. 7ರ ವರೆಗೆ ಏಳು ದಿನಗಳ ಪ್ರತಿಭಟನೆ ಆರಂಭಿಸಿದ್ದು, ಮೊಹಾಲಿಯನ್ನು ಚಂಡೀಗಢಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಬೀಡು ಬಿಟ್ಟಿದ್ದಾರೆ.
ರೈತರು ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನುಬದ್ಧ ಖಾತರಿ, ಅಮೆರಿಕ ಮತ್ತು ಯುರೋಪ್ ದೇಶಗಳೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದವನ್ನು ರದ್ದುಗೊಳಿಸುವುದು ಹಾಗೂ ರೈತರು ಮತ್ತು ಕೃಷಿ ಕಾರ್ಮಿಕರ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬೇಡಿಕೆಗಳ ಪಟ್ಟಿಯಲ್ಲಿ 'ನೀರು' ಪಂಜಾಬ್‌ಗೆ ಸಂಬಂಧಿಸಿದ ಪ್ರಮುಖ ವಿಷಯಗಳಲ್ಲಿ ಒಂದಾಗಿದ್ದು, ಪಂಜಾಬ್‌ನ ನದಿ ನೀರು ಹಂಚಿಕೆಗೆ ಸಂಬಂಧಿಸಿದ ಹಿಂದಿನ ಒಪ್ಪಂದಗಳನ್ನು ರದ್ದುಗೊಳಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಈ ವಿಷಯದ ಬಗ್ಗೆ ಪಂಜಾಬ್ ವಿಧಾನಸಭೆ ವಿಶೇಷ ಅಧಿವೇಶನ ಕರೆಯಬೇಕೆಂದು ಅವರು ಒತ್ತಾಯಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಆಲ್ ಇಂಡಿಯಾ ಕಿಸಾನ್ ಫೆಡರೇಶನ್ (ಎಐಕೆಎಫ್) ಅಧ್ಯಕ್ಷ ಪ್ರೇಮ್ ಸಿಂಗ್ ಭಂಗು, ದೀರ್ಘಕಾಲದ ನದಿ ನೀರಿನ ವಿವಾದವನ್ನು ರಿಪೇರಿಯನ್ ತತ್ವ (ನದಿ ತೀರದ ಹಕ್ಕು) ಮತ್ತು ಸಂವಿಧಾನದ ಆಧಾರದ ಮೇಲೆ ಬಗೆ ಹರಿಸುವುದು, 1966ರ ಮರು ಸಂಘಟನೆ ಕಾಯ್ದೆ 78, 79 ಮತ್ತು 80ನೇ ಸೆಕ್ಷನ್‌ಗಳನ್ನು ರದ್ದುಗೊಳಿಸುವುದು ಹಾಗೂ ರೈತರು ಮತ್ತು ಕೃಷಿ ಕಾರ್ಮಿಕರ ಸಂಪೂರ್ಣ ಸಾಲ ಮನ್ನಾ ಮಾಡುವುದು ಪ್ರಮುಖ ಬೇಡಿಕೆಗಳು ಎಂದು ಅವರು ಹೇಳಿದರು.
''ನಾವು ಅಮೆರಿಕ ಜೊತೆಗಿನ ಪ್ರಸ್ತಾವಿತ ಮುಕ್ತ ವ್ಯಾಪಾರ ಒಪ್ಪಂದವನ್ನು ವಿರೋಧಿಸುತ್ತೇವೆ. ಗೋಧಿ ಮತ್ತು ಭತ್ತವನ್ನು ಹೊರತುಪಡಿಸಿ ಎಲ್ಲಾ ಕೃಷಿ ಉತ್ಪನ್ನಗಳಿಗೆ ಸಿ2 ಪ್ಲಸ್ ಶೇ. 50 ಆಧಾರದ ಮೇಲೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡಬೇಕು, ಅಣೆಕಟ್ಟು ಸುರಕ್ಷತಾ ಕಾಯ್ದೆ, ವಿದ್ಯುತ್ ತಿದ್ದುಪಡಿ ಕಾಯ್ದೆ, ಮತ್ತು ಬೀಜ ಮಸೂದೆಯನ್ನು ರದ್ದುಗೊಳಿಸಬೇಕು, ಜೊತೆಗೆ ರೈತರು ಮತ್ತು ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯಾಗಿ ತಿಂಗಳಿಗೆ 10 ಸಾವಿರ ರೂ. ನೀಡಬೇಕು ಎಂದು ನಾವು ಆಗ್ರಹಿಸುತ್ತೇವೆ'' ಎಂದು ಅವರು ಹೇಳಿದರು.

