ಬೆಳೆ ಬೆಳೆಯಲು ಮಣ್ಣಿನ ಗುಣಮಟ್ಟ ಮುಖ್ಯವಾಗಿರುತ್ತದೆ. ಇದನ್ನು ತಿಳಿಯಲು ಮಣ್ಣಿನ ಪರೀಕ್ಷೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಪ್ರಯೋಗಾಲಯದಲ್ಲಿ ಮಣ್ಣಿನ ಪರೀಕ್ಷೆ ನಡೆಸಲಾಗುತ್ತದೆ. ಆದರೆ, ಸ್ವಿಟ್ಜರ್‌ಲೆಂಡ್‌ನ ವಿಜ್ಞಾನಿಗಳು ಮಣ್ಣಿನ ಪರೀಕ್ಷೆ ನಡೆಸಲು ಹತ್ತಿಯಿಂದ ಮಾಡಿದ 2 ಸಾವಿರ ಒಳುಡುಪುಗಳನ್ನು ಬಳಸಿದ್ದಾರೆ.
ಸ್ವಿಟ್ಜರ್‌ಲೆಂಡ್‌ನ ವಿವಿಧ ಭಾಗಗಳಲ್ಲಿ ಮಣ್ಣಿನ ಗುಣಮಟ್ಟ, ಅದರಲ್ಲಿರುವ ಜೀವಿಗಳ ಬಗ್ಗೆ ತಿಳಿಯಲು ತೋಟ, ಕೃಷಿ ಭೂಮಿ, ಹುಲ್ಲುಗಾವಲುಗಳಲ್ಲಿ 2 ಸಾವಿರಕ್ಕೂ ಹೆಚ್ಚು ಹತ್ತಿ ಒಳಉಡುಪುಗಳನ್ನು ಹೂತು ಹಾಕಿದ್ದರು. ಅದರೊಂದಿಗೆ ಪಾಲಿಪ್ರೊಪಿಲೀನ್ ಟೀ ಬ್ಯಾಗ್‌ಗಳನ್ನೂ ಹೂತು ಹಾಕಲಾಗಿತ್ತು. ಎರಡು ತಿಂಗಳ ನಂತರ ಅವುಗಳನ್ನು ಹೊರತೆಗೆದಾಗ ಕಾಟನ್ ಬಟ್ಟೆ ಬಹುತೇಕ ಕೊಳೆತು ಹೊಲಿಗೆಗಳು ಮಾತ್ರ ಉಳಿದಿದ್ದವು. ಟೀ ಬ್ಯಾಗ್‌ಗಳಲ್ಲಿ ಕೇವಲ ರಂಧ್ರ ಮಾತ್ರ ಉಂಟಾಗಿತ್ತು.
ಮಣ್ಣಿನ ಪರೀಕ್ಷೆಗೆ ಸಂಶೋಧಕರು ನಡೆಸಿದ ಈ ಪ್ರಕ್ರಿಯೆ ಸದ್ಯ ಜಗತ್ತಿನ ಗಮನ ಸೆಳೆದಿದೆ.
'ಪ್ರೂಫ್ ಬೈ ಅಂಡರ್‌ವೇರ್' ಎಂಬ ಶೀರ್ಷಿಕೆಯಡಿ ನಡೆಸಿದ ಪ್ರಾಯೋಗಿಕ ಅಧ್ಯಯನದ ಬಗ್ಗೆ 'ಪ್ಲಾಂಟ್ಸ್- ಪೀಪಲ್ & ಪ್ಲಾನೆಟ್' ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.
ಹತ್ತಿ ನೆಲದಡಿಯಲ್ಲಿ ಎಷ್ಟು ಬೇಗನೆ ಕೊಳೆಯುತ್ತದೆ ಎಂಬುದು ಮಣ್ಣಿನಲ್ಲಿನ ಜೈವಿಕ ಚಟುವಟಿಕೆ ಕಲ್ಪನೆಯನ್ನು ನೀಡುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಬ್ಯಾಕ್ಟೀರಿಯಾ, ಶಿಲೀಂಧ್ರ, ಹುಳುಗಳು ಸೇರಿದಂತೆ ಮಣ್ಣಿನಲ್ಲಿರುವ ವಿವಿಧ ಜೀವಿಗಳು ಸಕ್ರಿಯವಾಗಿರುವ ಪ್ರದೇಶಗಳಲ್ಲಿ ಹತ್ತಿ ವೇಗವಾಗಿ ಕೊಳೆಯುತ್ತದೆ. ಎರಡು ತಿಂಗಳಲ್ಲಿ ಹತ್ತಿ ಕರಗದಿದ್ದರೆ, ಆ ಪ್ರದೇಶದ ಮಣ್ಣಿನ ಗುಣಮಟ್ಟ ಉತ್ತಮವಾಗಿಲ್ಲ ಎನ್ನುವುದನ್ನು ಕಂಡುಕೊಂಡಿರುವುದಾಗಿ ವಿಜ್ಞಾನಿಗಳು ಹೇಳಿದ್ದಾರೆ.
ಹೀಗೆ ನಡೆಸಿದ ಪ್ರಯೋಗದಲ್ಲಿ, ತೋಟಗಳಲ್ಲಿ ಹೂತಿಟ್ಟ ಹತ್ತಿ ಒಳಉಡುಪು ಎರಡು ತಿಂಗಳಲ್ಲಿ ಶೇ 58ರಷ್ಟು ಕೊಳೆತಿತ್ತು. ಇದರರ್ಥ ತೋಟದ ಮಣ್ಣಿನಲ್ಲಿನ ಹುಳು, ಶಿಲೀಂಧ್ರ, ಬ್ಯಾಕ್ಟೀರಿಯಾದಂತೆ ಜೀವಿಗಳ ಉಪಸ್ಥಿತಿ ಹಾಗೂ ಮಣ್ಣಿನಲ್ಲಿ ಹೆಚ್ಚಿನ ಮಟ್ಟದ ಸಾವಯವ ಇಂಗಾಲ ಮತ್ತು ಪೋಷಕಾಂಶ ಇರುವುದು ಕಾರಣವಾಗಿರಬಹುದು. ಅಲ್ಲದೆ ರಂಜಕ, ಸಾರಜನಕ, ಪೊಟ್ಯಾಷಿಯಂ ಮಟ್ಟ ಉತ್ತಮವಾಗಿದೆ ಎಂದು ಸಂಶೋಧಕರು ಪ್ರತಿಪಾದಿಸಿದ್ದಾರೆ.
ಹುಲ್ಲುಗಾವಲುಗಳಲ್ಲಿ ಶೇ 40ರಷ್ಟು ಮಾತ್ರ ಹತ್ತಿ ಕೊಳೆತಿದ್ದು, ಇಲ್ಲಿನ ಮಣ್ಣಿನಲ್ಲಿ ಜೈವಿಕ ಚಟುವಟಿಕೆ ಕಡಿಮೆ ಇದೆ ಎನ್ನುವುದನ್ನು ಸೂಚಿಸಿದೆ. ಮಣ್ಣಿನ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ಅಧ್ಯಯನದ ಉದ್ದೇಶವಾಗಿದ್ದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಭೂಮಿಯ ಮೇಲ್ಮಣ್ಣು ಆಹಾರ ಉತ್ಪಾದನೆಗೆ ಅಡಿಪಾಯವಾಗಿದೆ. ಇತ್ತೀಚೆಗೆ ಪ್ರಪಂಚದ ಅನೇಕ ಭಾಗಗಳಲ್ಲಿ ಮಣ್ಣಿನ ಗುಣಮಟ್ಟ ವೇಗವಾಗಿ ಕುಸಿಯುತ್ತಿದೆ, ಇದು ಆಹಾರ ಉತ್ಪಾದನೆ, ಜೀವವೈವಿಧ್ಯ ಮತ್ತು ಪ್ರಕೃತಿಗೆ ಅಪಾಯವನ್ನುಂಟು ಮಾಡಬಹುದು ಎಂದು ಅಧ್ಯಯನ ಎಚ್ಚರಿಸಿದೆ.
ಐದು ವರ್ಷಗಳ ಹಿಂದೆ ಅಂದರೆ 2021ರಲ್ಲಿ ಈ ಪ್ರಯೋಗ ನಡೆಸಲಾಗಿದ್ದು, ಸಾವಿರಕ್ಕೂ ಹೆಚ್ಚು ಸ್ವಯಂಸೇವಕರು ಇದರ ಭಾಗವಾಗಿದ್ದರು.
ಈ ಪ್ರಯೋಗವು, ಮಣ್ಣಿನ ಆರೋಗ್ಯವನ್ನು ಪರೀಕ್ಷಿಸಲು ಒಳ ಉಡುಪನ್ನು ಸಾಧನವನ್ನಾಗಿ ಬಳಸುವುದಲ್ಲ, ಬದಲಿಗೆ ಸಾಮಾನ್ಯ ವಸ್ತುವೊಂದನ್ನು ಬಳಸಿಕೊಂಡು ಕಣ್ಣಿಗೆ ಕಾಣದ ಪ್ರಕ್ರಿಯೆಯೊಂದನ್ನು ಪತ್ತೆಮಾಡುವುದು ಹೇಗೆ ಸುಲಭವಾಗುತ್ತದೆ ಎಂಬುದನ್ನು ಇದು ತೋರಿಸಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

