ಬದಿಯಡ್ಕ: ನೀರ್ಚಾಲು-ಮಾನ್ಯ ಪರಿಸರದ ಪುದುಕೋಳಿ ಸೇತುವೆ ಬದಿ ಮತ್ತೆ ಹೊರಗಿನಿಂದ ಆಹಾರ ತ್ಯಾಜ್ಯವನ್ನು ತಂದು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಎಸೆಯುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ವಾರ್ಡ್ ಸದಸ್ಯರ ವತಿಯಿಂದ ಪಂಚಾಯತಿಗೆ ದೂರು ನೀಡಲಾಯಿತು.
ದೂರಿನ ಹಿನ್ನೆಲೆಯಲ್ಲಿ ಬದಿಯಡ್ಕ ಗ್ರಾಮ ಪಂಚಾಯತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕ ಆರೋಗ್ಯ ಹಾಗೂ ಪರಿಸರ ಸ್ವಚ್ಛತೆಯ ದೃಷ್ಟಿಯಿಂದ ಆಹಾರ ತ್ಯಾಜ್ಯವನ್ನು ತಂದು ಎಸೆಯುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ಆಹಾರ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುವವರ ವಿರುದ್ಧ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಪಂಚಾಯತಿ ಅಧಿಕಾರಿಗಳ ಗಮನಕ್ಕೆ ತರಲಾಯಿತು.
ಕ್ರಿಯಾ ಸಮಿತಿ ಗರಂ:
ಕಳೆದ ಎರಡು ತಿಂಗಳ ಹಿಂದೆಯೂ ಇದೇ ಪರಿಸರದಲ್ಲಿ ತ್ಯಾಜ್ಯ ತಂದು ಸುರಿಯುವುದನ್ನು ವಿರೋಧಿಸಿ ಪುದುಕೋಳಿ ಪರಿಸದ ನಾಗರಿಕರು ಗ್ರಾ.ಪಂ.ಸದಸ್ಯೆಯ ನೇತೃತ್ವದಲ್ಲಿ ಸಭೆ ಸೇರಿ ಕ್ರಿಯಾ ಸಮಿತಿ ರಚಿಸಿಕೊಂಡಿತ್ತು. ಈ ಕ್ರಿಯಾ ಸಮಿತಿಯು ಕಳೆದ ಎರಡು ವಾರಗಳ ಹಿಂದೆಯಷ್ಟೇ ಸೇತುವೆ ಪರಿಸರದ ಕಾಡು-ಪೊದೆಗಳನ್ನು ಕಡಿದು ನೈರ್ಮಲ್ಯ ಕ್ರಮ ಕೈಗೊಂಡಿತ್ತು. ಇದರ ಬೆನ್ನಲ್ಲೇ ಮತ್ತೆ ತ್ಯಾಜ್ಯ ತಂದು ಸುರಿದಿರುವುದು ನಾಗರಿಕರನ್ನು ರೋಷತಪ್ತರನ್ನಾಗಿಸಿದೆ. ಕ್ರಿಯಾ ಸಮಿತಿ ಈ ಹಿಂದೆಯೇ ಈ ಪರಿಸರದಲ್ಲಿ ಸೂಚನಾ ಫಲಕ ಹಾಗೂ ಸಿಸಿಟಿವಿ ಕ್ಯಾಮರಾ ಅಳವಡಿಸಲು ಯೋಚಿಸಿದ್ದು ಪ್ರಸ್ತುತ ಮುಂದುವರಿದಿರುವ ತ್ಯಾಜ್ಯ ಎಸೆತದ ಕಾರಣ ಸಿಸಿಟಿವಿ ಅಳವಡಿಸಿ ತ್ಯಾಜ್ಯ ಎಸೆಯುವವರ ವಿರುದ್ದ ಸಮರ ಸಾರಲು ನಿರ್ಧರಿಸಿದೆ.
ಮೂಗು ಮುಚ್ಚುವ ಸ್ಥಿತಿ:
ಪುದುಕೋಳಿ ಪರಿಸರದ ಅಲ್ಲಲ್ಲಿ ನಗರ ಪ್ರದೇಶಗಳಿಂದ ಮಧ್ಯರಾತ್ರಿಯ ಬಳಿಕ ಆಗಮಿಸುವ ವಾಹನಗಳಲ್ಲಿ ತ್ಯಾಜ್ಯತಂದು ಸಿರಿಯುವ ತಾಣವಾಗಿ ಕಳೆದೊಂದು ವರ್ಷದಿಂದ ಮಾರ್ಪಟ್ಟಿದೆ. ಆಹಾರ ತ್ಯಾಜ್ಯ, ಮಾಂಸಾವಶಿಷ್ಟ, ವೈದ್ಯಕೀಯ ತ್ಯಾಜ್ಯಗಳನ್ನೆಲ್ಲ ತಂದು ಇಲ್ಲಿ ಎಸೆಯಲಾಗುತ್ತಿದೆ. ಇದು ಪರಿಸರ ಪ್ರದೇಶದಲ್ಲಿ ದುರ್ವಾಸನೆ, ಉಸಿರಾಟದ ಸಮಸ್ಯೆ ಸಹಿತ ಆರೋಗ್ಯದ ಮೇಲೆ ವ್ಯಾಪಕ ಪರಿಣಾಮ ಬೀರುತ್ತಿರುವುದು ಗಮನಕ್ಕೆ ಬಂದಿದೆ. ತ್ಯಾಜ್ಯಗಳು ಬಾವಿ ನೀರಿಗೆ ಸೇರಿಕೊಂಡು ನಿತ್ಯೋಪಯೋಗಿ ನೀರಿಗೆ ಸಮಸ್ಯೆ ಸೃಷ್ಟಿಸಿದೆ.

.jpg)
.jpg)
.jpg)
