ಕಾಸರಗೋಡು: ಚಲಿಸುತ್ತಿದ್ದ ಕಾರೊಂದರಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು, ವಾಹನ ಸಂಪೂರ್ಣವಾಗಿ ಸುಟ್ಟು ಹೋದ ಘಟನೆ ನೆಲ್ಲಿಕಟ್ಟೆ ರಸ್ತೆಯ ಅದ್ರುಂಗುಳಿ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಅದ್ರುಂ ಗುಳಿ ಎಂಬಲ್ಲಿ ಚಲಿಸುತ್ತಿದ್ದಾಗ ಇಂಜಿನ್‌ನಿಂದ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ.
ಈ ವೇಳೆ ಕಾರು ಚಲಾಯಿಸುತ್ತಿದ್ದ ಅಶ್ರಫ್ ಅವರು ಬ್ರೇಕ್ ಹಾಕಿ ವಾಹನ ನಿಲ್ಲಿಸಲು ಯತ್ನಿಸಿದರೂ ಬ್ರೇಕ್ ಫೇಲ್ ಆಗಿದೆ. ಇದರಿಂದ ಕಾರು ಹಿಂದಕ್ಕೆ ಚಲಿಸಿ ರಸ್ತೆ ಬದಿಯ ಕಾಂಕ್ರೀಟ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ತಕ್ಷಣವೇ ಚಾಲಕ ಸೀಟ್ ಬೆಲ್ಟ್ ಬಿಚ್ಚಿ ಹೊರಗೆ ಜಿಗಿದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಕಾಸರಗೋಡು ಅಗ್ನಿಶಾಮಕ ದಳದ ಸಿಬ್ಬ೦ದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು.

