HEALTH TIPS

ಐಐಟಿ ಬಾಂಬೆ ವಿದ್ಯಾರ್ಥಿ ಆತ್ಮಹತ್ಯೆ: ಪ್ರೊಫೆಸರ್ ಸೇರಿ ಮೂವರ ವಿರುದ್ಧ ಪ್ರಕರಣ

ಮುಂಬೈ: ಐಐಟಿ ಬಾಂಬೆ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೊಫೆಸರ್ ಸೂರ್ಯನಾರಾಯಣ ದುಲ್ಲಾ ಮತ್ತು ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 


ಈ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಇದರ ಹೆಚ್ಚಿನ ತನಿಖೆಯನ್ನು ಕ್ರೈಮ್ ಬ್ರಾಂಚ್‌ಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಏನಿದು ಪ್ರಕರಣ:

'ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆಯಲ್ಲಿ ಓದುತ್ತಿದ್ದ ಮಹಾರಾಷ್ಟ್ರದ ಯವತ್ಮಾಳ್‌ ಜಿಲ್ಲೆಯ ಸಾಹಿಲ್ ರವೀಂದ್ರ ವಾಕೋಡೆ (22) ಶವ ಹಾಸ್ಟೆಲ್‌ ಕೋಣೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದ ಸ್ಥಿತಿಯಲ್ಲಿ ಶುಕ್ರವಾರ ಸಂಜೆ ಪತ್ತೆಯಾಗಿತ್ತು.

ಪರೀಕ್ಷೆಯಲ್ಲಿ ಮೊಬೈಲ್ ಫೋನ್‌ ಬಳಸಿ ಚಾಟ್‌ಜಿಪಿಟಿ ತಂತ್ರಾಂಶದ ನೆರವಿನೊಂದಿಗೆ ನಕಲು ಮಾಡಲು ಯತ್ನಿಸಿಸಿಕ್ಕಿಬಿದ್ದ ಸಾಹಿಲ್‌, ಬಳಿಕ ಹಾಸ್ಟೆಲ್‌ನ ತನ್ನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು.

ನ್ಯಾಯಕ್ಕಾಗಿ ಪೋಷಕರ ಪಟ್ಟು:

ಸಂಸ್ಥೆಯ ನಿರ್ದೇಶಕ ಶಿರೀಶ್ ಬಿ. ಕೇದಾರೆ ಅವರ ಕುಮ್ಮಕ್ಕಿನಿಂದ, ಪ್ರೊಫೆಸರ್ ದುಲ್ಲಾ ಅವರು ಕಳೆದ ಮೂರು ತಿಂಗಳಿನಿಂದಲೂ ತಮ್ಮ ಮಗನ ವಿರುದ್ಧ ಜಾತಿ ನಿಂದನೆ ಹಾಗೂ ಬೆದರಿಕೆಗ ಒಡ್ಡಲಾಗುತ್ತಿತ್ತು ಎಂದು ಮೃತ ಸಾಹಿಲ್ ತಂದೆ ರವೀಂದ್ರ ವಾಕೋಡೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಾಹಿಲ್ ತಾಯಿ ಕೂಡ ತಮ್ಮ ಮಗನಿಗೆ ನೀಡಲಾದ ಮಾನಸಿಕ ಕಿರುಕುಳವೇ ಆತನ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಸಾಹಿಲ್ ನಮ್ಮ ಒಬ್ಬನೇ ಮಗ. ನಮಗೆ ನ್ಯಾಯ ಸಿಗುವವರೆಗೂ ನಾವು ಇಲ್ಲೇ ಕುಳಿತು ಹೋರಾಡುತ್ತೇವೆ. ಆತ ಅತ್ಯಂತ ಕಠಿಣ ಪರಿಶ್ರಮಿ. ಎಂದಿಗೂ ಆತ್ಮಹತ್ಯೆಗೆ ಯತ್ನಿಸುವಂತವನಲ್ಲ. ಆತನ ಸಾವಿಗೆ ಈ ಸಂಸ್ಥೆಯೇ ಕಾರಣ. ಮಾನಸಿಕವಾಗಿ ಪೀಡಿಸಿ ಆತನನ್ನು ಕೊಲ್ಲಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರೀಕ್ಷೆಯ ದಿನದ ಘಟನೆ:

ಶುಕ್ರವಾರ ನಡೆದ ಮಿಡ್-ಸೆಮೆಸ್ಟರ್ ಪರೀಕ್ಷೆಯ ವೇಳೆ ಸಾಹಿಲ್ ಮೊಬೈಲ್ ಬಳಸಿ 'ChatGPT' ಮೂಲಕ ಉತ್ತರ ಹುಡುಕುತ್ತಿದ್ದಾಗ ಸಿಕ್ಕಿಬಿದ್ದಿದ್ದ. ತರಗತಿಯ ಮೇಲ್ವಿಚಾರಕರಾಗಿದ್ದ ಪ್ರೊಫೆಸರ್ ದುಲ್ಲಾ ಅವರು ತೀವ್ರವಾಗಿ ಗದರಿಸಿ, ಒಂದು ವರ್ಷ ಕಾಲ ಅಮಾನತುಗೊಳಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಪ್ರತ್ಯಕ್ಷದರ್ಶಿ ವಿದ್ಯಾರ್ಥಿಗಳು ಮತ್ತು ಪೋಷಕರು ಆರೋಪಿಸಿದ್ದಾರೆ.

ಸಾಹಿಲ್ ತಂದೆ ರವೀಂದ್ರ ಅವರು ನೀಡಿದ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ತಮ್ಮ ಮಗ ದ್ವಿತೀಯ ವರ್ಷಕ್ಕೆ ಕಾಲಿಟ್ಟ ಮೇಲೆಯೇ ಆತನಿಗೆ ಈ ಎಲ್ಲಾ ತೊಂದರೆಗಳು ಪ್ರಾರಂಭವಾದವು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸ್ಪಷ್ಟನೆ ನೀಡಿದ ಸಂಸ್ಥೆ:

ಐಐಟಿ ಬಾಂಬೆ ಈ ಆರೋಪಗಳನ್ನು ಅಲ್ಲಗಳೆದಿದೆ. 'ಪರೀಕ್ಷಾ ಕೊಠಡಿಗೆ ಮೊಬೈಲ್‌ ಫೋನ್‌ ತಂದಿದ್ದ ಸಾಹಿಲ್‌, ಪ್ರಶ್ನೆ ಪತ್ರಿಕೆಯನ್ನು ಚಾಟ್‌ಜಿಪಿಟಿಗೆ ಅಪ್‌ಲೋಡ್‌ ಮಾಡಿ, ಅದಕ್ಕೆ ಉತ್ತರ ನೀಡುವಂತೆ ಕೇಳಿದ್ದ. ಆದರೂ ಆತನ ವಿರುದ್ಧ ಯಾವುದೇ ತಕ್ಷಣದ ಕ್ರಮ ಕೈಗೊಂಡಿರಲಿಲ್ಲ' ಎಂದು ತಿಳಿಸಿದೆ.

ವಿಭಾಗದ ಮುಖ್ಯಸ್ಥರು ಹಾಗೂ ಪರೀಕ್ಷಾ ಮೇಲ್ವಿಚಾರಕರು ಸಾಹಿಲ್‌ ನೊಂದಿಗೆ ಮಾತನಾಡಿದ್ದರು. ಈ ರೀತಿ ಮಾಡಿದರೆ ನಿನ್ನ ವಿದ್ಯಾಭ್ಯಾಸಕ್ಕೆ ತೊಂದರೆಯುಂಟಾಗುತ್ತದೆ ಎಂದು ಮನವರಿಕೆ ಮಾಡಿಸಿದ್ದರು. ಬಳಿಕ ಹಾಸ್ಟೆಲ್‌ಗೆ ಹೋದ ಸಾಹಿಲ್‌ ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ತನಿಖೆಯೂ ನಡೆಯುತ್ತಿದೆ ಎಂದು ಶುಕ್ರವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಸಂಸ್ಥೆ ತಿಳಿಸಿದೆ.

ವಿದ್ಯಾರ್ಥಿಗಳ ಪ್ರತಿಭಟನೆ:

ಘಟನೆಯ ಬಳಿಕ ಕ್ಯಾಂಪಸ್‌ನಲ್ಲಿ ನೂರಾರು ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿ ಸಂಸ್ಥೆಯ ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಸಾಹಿಲ್ ಅವರನ್ನು ಒಂದು ವರ್ಷ ಅವಧಿಗೆ ಅಮಾನತುಗೊಳಿಸುವುದಾಗಿ ಮತ್ತು ಆ ಅವಧಿಯಲ್ಲಿ ಹಾಸ್ಟೆಲ್ ಖಾಲಿ ಮಾಡುವಂತೆ ಬೆದರಿಕೆ ಹಾಕಲಾಗಿತ್ತು ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಮುಂದುವರಿದ ತನಿಖೆ: ಸ್ಥಳದಲ್ಲಿ ಮರಣಪತ್ರ ದೊರೆತಿಲ್ಲ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಎಫ್‌ಐಆರ್‌ ದಾಖಲಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಕಳೆದ ಏಳು ತಿಂಗಳಲ್ಲಿ ಸಾಹಿಲ್‌ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries