ಇಂಫಾಲ: ಜನಗಣತಿಗೂ ಮುನ್ನ ರಾಷ್ಟ್ರೀಯ ಪೌರತ್ವ ನೋಂದಣಿಯ (ಎನ್‌ಆರ್‌ಸಿ) ಪರಿಷ್ಕರಣೆಗೆ ಆಗ್ರಹಿಸಿ'ಕ್ಯಾಂಪೇನ್ ಫಾರ್ ಜಸ್ಟ್ ಆಯಂಡ್ ಫೇರ್ ಡಿಲಿಮಿಟೇಷನ್ (ಜೆಎಫ್‌ಡಿ)' ಕರೆ ನೀಡಿದ್ದ 24 ಗಂಟೆಗಳ ಬಂದ್‌ನಿಂದಾಗಿ ಮಂಗಳವಾರ ಮಣಿಪುರದ ಕನಿಷ್ಠ ಐದು ಕಣಿವೆ ಜಿಲ್ಲೆಗಳಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಇಂಫಾಲ ಪೂರ್ವ ಮತ್ತು ಪಶ್ಚಿಮ, ಥೌಬಾಲ್, ಬಿಷ್ಣುಪುರ ಮತ್ತು ಕಾಕ್‌ಚಿಂಗ್ ಜಿಲ್ಲೆಗಳಲ್ಲಿ ವ್ಯಾಪಾರ ವಹಿವಾಟುಗಳು ಹಾಗೂ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿದ್ದವು, ಸಾರ್ವಜನಿಕ ಸಾರಿಗೆ ಸಂಚಾರ ಸ್ಥಗಿತಗೊಂಡಿತ್ತು ಮತ್ತು ಬೀದಿಗಳು ಬಿಕೋ ಎನ್ನುತ್ತಿದ್ದವು. ರಸ್ತೆಗಳಲ್ಲಿ ಕೆಲವೇ ಖಾಸಗಿ ವಾಹನಗಳು ಕಂಡುಬಂದವು.
ಸಾಮಾಜಿಕ ಸಂಘಟನೆಗಳ ಬೇಡಿಕೆಯನ್ನು ಪರಿಗಣಿಸಿ ಸೋಮವಾರ ಕೇಂದ್ರ ಸರಕಾರವು ಮಣಿಪುರದಲ್ಲಿ ಜನಗಣತಿ ಪ್ರಕ್ರಿಯೆಯನ್ನು ಮುಂದೂಡಿತ್ತು. ಬಂದ್ ಅನ್ನು ಹಿಂಪಡೆಯುವಂತೆ ರಾಜ್ಯ ಗೃಹ ಸಚಿವ ಗೋವಿಂದ್ ಕೊಂಥೌಜಮ್ ಅವರು ಜೆಎಫ್‌ಡಿಗೆ ಮನವಿ ಮಾಡಿಕೊಂಡಿದ್ದರು.
ಮಣಿಪುರದಲ್ಲಿ ಸೆ.1ರಂದು ಜನಗಣತಿ ಪ್ರಕ್ರಿಯೆ ಆರಂಭವಾಗಬೇಕಿತ್ತು.
ಆದರೆ, ಜನಗಣತಿಯನ್ನು ಮುಂದೂಡಲಾಗಿರವ ಬಗ್ಗೆ ಯಾವುದೇ ಅಧಿಕೃತ ಆದೇಶವಿಲ್ಲ ಎಂದು ಸೋಮವಾರ ತಡರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದ ಜೆಎಫ್‌ಡಿ, ಬಂದ್ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿತ್ತು.
ದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಪುನರ್‌ಪರಿಶೀಲನಾ ಸಭೆಯ ಬಳಿಕ ಮಣಿಪುರದಲ್ಲಿ ಜನಗಣತಿಯನ್ನು ಮುಂದೂಡಲಾಗಿದೆ ಎಂದು ಸೋಮವಾರ ಸಂಜೆ ಮುಖ್ಯಮಂತ್ರಿಗಳ ಸಚಿವಾಲಯವು ತಿಳಿಸಿತ್ತು.

