ಕಠ್ಮಂಡು: ಭೀಕರ ಪ್ರವಾಹದ ಬಳಿಕ ಎಚ್ಚೆತ್ತಿರುವ ನೇಪಾಳದ ವಿದೇಶಾಂಗ ಸಚಿವಾಲಯವು ಪರಿಸರ ರಾಜತಾಂತ್ರಿಕ ವಿಭಾಗ ಸ್ಥಾಪನೆಗೆ ಮುಂದಾಗಿದೆ.
ಹವಾಮಾನದಲ್ಲಾಗುವ ಬದಲಾವಣೆ, ಪರಿಸರ ಸಂಬಂಧಿತ ವಿಷಯಗಳ ಕುರಿತಾದ ರಾಜತಾಂತ್ರಿಕ ಪ್ರಯತ್ನ ಬಲಪಡಿಸಲು ನೇಪಾಳ ಈ ಕ್ರಮ ಕೈಗೊಂಡಿದೆ. ಹವಾಮಾನ ಬದಲಾವಣೆಯಿಂದ ನೇಪಾಳದ ಮೇಲೆ ಪರಿಣಾಮ ಹೆಚ್ಚುತ್ತಿದ್ದು, ಅದಕ್ಕೆ ಪರಿಣಾಮಕಾರಿ ಮತ್ತು ಸೂಕ್ತ ಪ್ರತಿಕ್ರಿಯೆಯಯ ಅಗತ್ಯವನ್ನು ಅರಿತು, ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.
ಆಗಸ್ಟ್ 26ರಂದು ನೇಪಾಳದ-ಟಿಬೆಟ್ ಗಡಿಯಲ್ಲಿ ಸಂಭವಿಸಿದ್ದ ಭೀಕರ ಪ್ರವಾಹಕ್ಕೆ ಸಿಲುಕಿ, 1,400 ಮಂದಿ ಮೃತಪಟ್ಟು, 6,000ಕ್ಕು ಅಧಿಕ ಮಂದಿ ನಾಪತ್ತೆಯಾಗಿದ್ದರು. ತಾಪಮಾನ ಏರಿಕೆಯ ಪರಿಣಾಮ, ಹಿಮಬಂಡೆಗಳು ಕುಸಿದು ಈ ದಿಢೀರ್ ಪ್ರವಾಹ ಉಂಟಾಗಿತ್ತು.
ಈ ಹೊಸ ರಾಜತಾಂತ್ರಿಕ ವಿಭಾಗವು, ವಿಶ್ವಸಂಸ್ಥೆಯ ಪರಿಸರ ಕುರಿತಾದ ಕೆಲಸದಲ್ಲಿ ತೊಡಗಿರುವ ವಿಭಾಗ, ಈ ಸಂಬಂಧಿತ ನುರಿತ ಸಂಸ್ಥೆಗಳ ಜೊತೆ ಕೆಲಸ ಮಾಡಲಿದೆ.
ಅಲ್ಲದೇ, ಹವಾಮಾನ ಬದಲಾವಣೆ ಮತ್ತು ಪರಿಸರ ಸಮಸ್ಯೆಗಳ ಕುರಿತಾದ ಸಮ್ಮೇಳನಗಳಲ್ಲಿ ನೇಪಾಳದ ಭಾಗವಹಿಸುವಿಕೆಯನ್ನು ಖಚಿತಪಡಿಸುತ್ತದೆ. ಈ ಸಂಬಂಧಿತ ರಾಷ್ಟ್ರೀಯ ಸಂಸ್ಥೆಗಳ ಜೊತೆ ಸಮನ್ವಯ ಸಾಧಿಸುತ್ತದೆ.
ಪರಿಸರದಲ್ಲಿ ಬದಲಾವಣೆ ಮತ್ತು ಪರಿಸರ ಸಂರಕ್ಷಣೆ ಕುರಿತಂತೆ ರಾಷ್ಟ್ರೀಯ, ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವೇದಿಕೆಯಲ್ಲಿ ನೇಪಾಳ ಸಕ್ರಿಯವಾಗಿ ಪ್ರಸ್ತಾಪ ಮಾಡುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

