ನವದೆಹಲಿ (PTI): 'ವೈದ್ಯಕೀಯ ಸಿಬ್ಬಂದಿ ಮೇಲೆ ಯಾರೂ ಹಲ್ಲೆ ಮಾಡಬಾರದು. ಅವರ ಮೇಲಿನ ದಾಳಿಯನ್ನು ಸಹಿಸುವುದಿಲ್ಲ. ನಮ್ಮ ಈ ಸಂದೇಶವು ದೇಶದ ಜನರಿಗೆ ಸ್ಪಷ್ಟವಾಗಿ ತಲುಪಬೇಕು. ವೈದ್ಯಕೀಯ ಸಿಬ್ಬಂದಿ ಜನರ ಸೇವಕರು. ಅವರ ಮೇಲೆ ದಾಳಿ ನಡೆಸಬಾರದು' ಎಂದು ಸುಪ್ರೀಂ ಕೋರ್ಟ್ ಸೋಮವಾರ ಸ್ಪಷ್ಟ ಮಾತುಗಳಲ್ಲಿ ಹೇಳಿದೆ.
ಮಹಾರಾಷ್ಟ್ರದ ಠಾಣೆ ಜಿಲ್ಲೆಯ ನಗರ ಪಾಲಿಕೆ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಶಿವಸೇನಾ ಕಾರ್ಪೋರೇಟರ್ ರಮೇಶ್ ಮ್ಹಾತ್ರೆ ಅವರಿಗೆ ಜಾಮೀನು ನೀಡಿದ್ದ ಬಾಂಬೆ ಹೈಕೋರ್ಟ್ ಆದೇಶಕ್ಕೆ ನ್ಯಾಯಾಲಯ ತಡೆ ನೀಡಿತು. ಮಹಾರಾಷ್ಟ್ರ ಸರ್ಕಾರದ ಮೇಲ್ಮನವಿಯನ್ನು ಪುರಸ್ಕರಿಸಿತು.
ಜೊತೆಗೆ, 'ಮೂರು ದಿನಗಳಲ್ಲಿ ಪೊಲೀಸರಿಗೆ ಶರಣಾಗಿ' ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು ರಮೇಶ್ ಅವರಿಗೆ ಸೂಚಿಸಿತು.
'ಠಾಣೆಯಲ್ಲಿ ವರ್ತಿಸಿದಂತೆಯೇ ರಮೇಶ್ ಅವರು ಬೇರೆ ಕಡೆಯಲ್ಲಿ ಮತ್ತೊಮ್ಮೆ ವರ್ತಿಸಿದ್ದಾರೆ' ಎಂದು ಪೀಠ ಹೇಳಿತು. 'ಇದು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ಗಂಭೀರ ವಿಚಾರ. ಯಾರೂ ವೈದ್ಯರ ಮೇಲೆ ದಾಳಿ ನಡೆಸಬಾರದು ಎಂದು ಸಂದೇಶವನ್ನು ರವಾನಿಸಲು ನ್ಯಾಯಾಲಯ ಬಯಸುತ್ತದೆ' ಎಂದು ನ್ಯಾಯಮೂರ್ತಿ ಮೆಹ್ತಾ ಹೇಳಿದರು.

