ಮಹಾರಾಷ್ಟ್ರ: ಮಕ್ಕಳ ಭವಿಷ್ಯಕ್ಕಾಗಿ ತಾಯಿ ಏನು ಬೇಕಾದರೂ ಮಾಡಬಲ್ಲಳು ಎಂಬುದಕ್ಕೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಾಜೋಗೈನ ರಮಾಬಾಯಿ ರಣವೀರ್ ಎಂಬುವವರು ನಿದರ್ಶನ.
47 ವರ್ಷ ವಯಸ್ಸಿನ ರಮಾಬಾಯಿ, ಕ್ರೀಡಾ ಸಮಸ್ತ್ರ, ಟ್ರ್ಯಾಕ್ ಸೂಟ್ ಮತ್ತು ಸ್ಪೋರ್ಟ್ಸ್ ಶೂ ಧರಿಸಿದ್ದ ಯುವ ಓಟಗಾರರನ್ನು ಹಿಂದೆಹಾಕಿ ಮ್ಯಾರಥಾನ್‌ನಲ್ಲಿ ಪ್ರಥಮ ಸ್ಥಾನ ಪಡೆದು ಸೈ ಎನಿಸಿಕೊಂಡಿದ್ದಾರೆ.
ಖೋಲೇಶ್ವರ ಶಿಕ್ಷಣ ಸಂಕೀರ್ಣದ 'ಅಮೃತ ಮಹೋತ್ಸವ'ದ ಅಂಗವಾಗಿ 'ಅಮೃತ ದೌಡ್' ಮ್ಯಾರಥಾನ್ ಹಮ್ಮಿಕೊಳ್ಳಲಾಗಿತ್ತು. ಛತ್ರಪತಿ ಶಿವಾಜಿ ಮಹಾರಾಜ್ ಚೌಕ್‌ನಿಂದ ಪ್ರಾರಂಭವಾದ ಈ ಓಟವು ಭಾಗ್ಯನಗರ ಚೌಕ್‌ನಲ್ಲಿ ಮುಕ್ತಾಯಗೊಂಡಿತು. ಈ ಸ್ಪರ್ಧೆಯಲ್ಲಿ ನೂರಾರು ಸ್ಥಳೀಯ ಯುವಕ-ಯುವತಿಯರು ಪಾಲ್ಗೊಂಡಿದ್ದರು.
ಸಾಧಾರಣ ಸೀರೆ ಹಾಗೂ ಚಪ್ಪಲಿ ಧರಿಸಿ ಸ್ಪರ್ಧೆಯ ಸ್ಥಳಕ್ಕೆ ಬಂದ ರಮಾಬಾಯಿ ಅವರನ್ನು ಕಂಡಾಗ, ಯಾರೂ ಸಹ ಇವರೇ ಗೆಲ್ಲುತ್ತಾರೆ ಎಂದು ಊಹಿಸಿರಲಿಲ್ಲ. ಸ್ಪರ್ಧೆ ಆರಂಭವಾಗುತ್ತಿದ್ದಂತೆ ರಮಾಬಾಯಿ ಆತ್ಮವಿಶ್ವಾಸದಿಂದ ಓಡಲು ತೊಡಗಿದರು. ಆದರೆ ಮಧ್ಯದಾರಿಯಲ್ಲಿ ಅವರ ಚಪ್ಪಲಿಗಳು ಜಾರಲು ಪ್ರಾರಂಭಿಸಿ, ವೇಗಕ್ಕೆ ಅಡ್ಡಿಯಾದವು. ಧೃತಿಗೆಡದ ರಮಾಬಾಯಿ, ತಕ್ಷಣ ಚಪ್ಪಲಿಗಳನ್ನು ಕೈಯಲ್ಲಿ ಹಿಡಿದುಕೊಂಡು ಬರಿಗಾಲಿನಲ್ಲಿ ಓಡಲು ಶುರು ಮಾಡಿದರು.
ರಸ್ತೆಯಲ್ಲಿದ್ದ ಕಲ್ಲು-ಮುಳ್ಳುಗಳ ಕಿರಿಕಿರಿ, ಒಂದೆಡೆ ಸೀರೆಯನ್ನು ನಿಭಾಯಿಸುವ ಸವಾಲು ಇವ್ಯಾವುದೂ ರಮಾಬಾಯಿ ಅವರ ಗುರಿಯನ್ನು ತಪ್ಪಿಸಲಿಲ್ಲ. ಮಗಳ ಶಿಕ್ಷಣದ ಕನಸೊಂದೇ ಅವರ ಕಣ್ಣ ಮುಂದಿತ್ತು. ಪ್ರತಿಯೊಂದು ಹೆಜ್ಜೆಯಲ್ಲೂ ಛಲದೊಂದಿಗೆ ಮುನ್ನುಗ್ಗಿದ ಅವರು, ದುಬಾರಿ ಶೂ ಧರಿಸಿದ್ದ ಯುವ ಸ್ಪರ್ಧಿಗಳನ್ನು ಹಿಂದಿಕ್ಕಿ ಮೊದಲಿಗರಾಗಿ ಗೆಲುವಿನ ಗೆರೆ ದಾಟಿದರು.
ಪ್ರಶಸ್ತಿ ಹಣ ಮಗಳ ಶಿಕ್ಷಣಕ್ಕೆ!
ರಮಾಬಾಯಿ ಅವರ ಈ ಅದ್ಭುತ ಗೆಲುವನ್ನು ಕಂಡು ಸ್ಥಳೀಯರು ಹಾಗೂ ಆಯೋಜಕರು ಭಾವುಕರಾಗಿ ಚಪ್ಪಾಳೆ ತಟ್ಟಿದರು. ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ಅವರಿಗೆ ₹3,000 ರೂಪಾಯಿ ನಗದು ಬಹುಮಾನ ಸಿಕ್ಕಿದೆ. 'ಈ ಹಣವನ್ನು ನನ್ನ ಮಗಳ ಶಿಕ್ಷಣಕ್ಕಾಗಿ ಬಳಸುತ್ತೇನೆ' ಎಂದು ರಮಾಬಾಯಿ ಸಂತಸದಿಂದ ಹೇಳಿದರು.

