ನವದೆಹಲಿ: ಐಪಿಎಸ್ ಅಧಿಕಾರಿ ಸಂಜುಕ್ತಾ ಪರಾಶರ್ ಅವರನ್ನು ಸಿಆರ್‌ಪಿಎಫ್‌ನ ವಿಶೇಷ ಜಂಗಲ್ ವಾರ್ಫೇರ್ ಕಮಾಂಡೋ ಘಟಕವಾದ 'ಕೋಬ್ರಾ' ಪಡೆಗೆ ಐಜಿ ಆಗಿ ನೇಮಕ ಮಾಡಲಾಗಿದೆ.
ಈ ಮೂಲಕ ಈ ವಿಶೇಷ ಪಡೆಯ ನೇತೃತ್ವ ವಹಿಸಿದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಅಸ್ಸಾಂ-ಮೇಘಾಲಯ ಕೇಡರ್‌ನ 2006ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಸಂಜುಕ್ತಾ ಪರಾಶರ್, ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದ 1996ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ದಾನೇಶ್ ರಾಣಾ ಅವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಕುರಿತು ಸಿಆರ್‌ಪಿಎಫ್ ಪ್ರಧಾನ ಕಚೇರಿ ಅಧಿಕೃತ ಆದೇಶ ಹೊರಡಿಸಿದೆ.
ಸಂಜುಕ್ತಾ ಪರಾಶರ್ ಅವರು ಈ ಹಿಂದೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ಅಸ್ಸಾಂನಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದಾರೆ.
ಈಶಾನ್ಯ ರಾಜ್ಯಗಳಲ್ಲಿ ನಕ್ಸಲ್ ದಂಗೆಯನ್ನು ಎದುರಿಸಲು 2008-09ರಲ್ಲಿ 10 ಬೆಟಾಲಿಯನ್‌ಗಳನ್ನು ಒಳಗೊಂಡ ಈ ಪಡೆಯನ್ನು ಸಿಆರ್‌ಪಿಎಫ್ ಸ್ಥಾಪಿಸಿತ್ತು.
ಮಣಿಪುರದಲ್ಲಿ ಸಶಸ್ತ್ರ ಹಿಂಸಾಚಾರವನ್ನು ತಡೆಯಲು ಇತ್ತೀಚೆಗೆ ಕೋಬ್ರಾದ ಎರಡು ತುಕಡಿಗಳನ್ನು ನಿಯೋಜಿಸಲಾಗಿತ್ತು. ನಕ್ಸಲ್ ನಿಗ್ರಹ ಕಾರ್ಯಾಚರಣೆಗಳಲ್ಲಿ ಈ ಪಡೆಯ ಪಾತ್ರ ಪ್ರಮುಖವಾದದ್ದು.
ಇದೇ ಆದೇಶದಲ್ಲಿ 2003ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ವಿ.ಕೆ. ಬಿರ್ಡಿ ಅವರನ್ನು ಸಿಆರ್‌ಪಿಎಫ್‌ನ ವಿಐಪಿ ಭದ್ರತಾ ವಿಭಾಗದ ನೂತನ ಐಜಿಯಾಗಿ ನೇಮಿಸಲಾಗಿದೆ.

