ನವದೆಹಲಿ: ಹೊಸ ಯುಜಿಸಿ ನಿಯಮಾವಳಿಗಳ ವಿರುದ್ಧ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಕರ್ಣಿ ಸೇನೆಗೆ ಅನುಮತಿ ನಿರಾಕರಿಸಿರುವ ದಿಲ್ಲಿ ಪೊಲೀಸರನ್ನು ದಿಲ್ಲಿ ಹೈಕೋರ್ಟ್ ಗುರುವಾರ ತರಾಟೆಗೆ ತೆಗೆದುಕೊಂಡಿದೆ. ಪ್ರತಿಭಟನೆಗಳ ಮೇಲೆ ಸಾರಾಸಗಟು ನಿಷೇಧ ಹೇರುವುದನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ ಎಂದು ನ್ಯಾಯಾಲಯ ಪೊಲೀಸರನ್ನು ಪ್ರಶ್ನಿಸಿದೆ.
ಇತ್ತೀಚೆಗೆ ಜಾರಿಯಾಗಿರುವ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ನಿಯಮಾವಳಿಗಳು, 2026ರ ವಿರುದ್ಧ ಸೆಪ್ಟಂಬರ್ 20 ರಂದು ಜಂತರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಅನುಮತಿ ನಿರಾಕರಿಸಿದ ದಿಲ್ಲಿ ಪೊಲೀಸರ ಕ್ರಮವನ್ನು ಪ್ರಶ್ನಿಸಿ ರಾಜ್ ಶೇಖಾವತ್ ಎಂಬವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ನೇತೃತ್ವದ ಪೀಠವೊಂದು ನಡೆಸಿತು.
ನ್ಯಾಯಾಲಯದ ಮುಂದೆ ಹಾಜರಾದ ಅರ್ಜಿದಾರರ ಪರ ವಕೀಲರು, ಪೊಲೀಸರು ಆರಂಭದಲ್ಲಿ ಸೆಪ್ಟಂಬರ್ 20ರಂದು ಪ್ರತಿಭಟನೆ ನಡೆಸಲು ಅನುಮತಿ ನೀಡಿದ್ದರು, ಆದರೆ ನಂತರ ತಮ್ಮ ನಿರ್ಧಾರದಿಂದ ಹಿಂದೆ ಸರಿದರು ಎಂದು ಹೇಳಿದರು. ಪ್ರತಿಭಟನೆಗೆ ದೊಡ್ಡ ಪ್ರಮಾಣದಲ್ಲಿ ಜನರು ಸೇರುವ ಆತಂಕವಿದೆ ಎಂದು ಪೊಲೀಸರು ತಮ್ಮ ಪತ್ರದಲ್ಲಿ ಹೇಳಿದ್ದಾರೆ ಎಂದು ಅವರು ತಿಳಿಸಿದರು.
ಪ್ರತಿಭಟನೆಯ ಸ್ಥಳವನ್ನು ಬದಲಾಯಿಸಿದರೆ ಅನುಮತಿ ನೀಡಬಹುದೇ ಎಂದು ನ್ಯಾಯಾಲಯ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮರನ್ನು ಕೇಳಿತು. ''ನೀವು ಯಾವುದೇ ಷರತ್ತುಗಳನ್ನು ವಿಧಿಸಿ ಎಂದು ನಾನು ಹೇಳುತ್ತಿದ್ದೇನೆ. ಜಂತರ್ ಮಂತರ್ ಅಲ್ಲದಿದ್ದರೆ ಬೇರೆ ಯಾವುದಾದರೂ ಸ್ಥಳವನ್ನು ಸೂಚಿಸಿ. ಸಾರಾಸಗಟು ನಿಷೇಧ ಹೇರಲು ಹೇಗೆ ಸಾಧ್ಯ ಎಂದು ಮಾತ್ರ ನಾನು ಸರಕಾರವನ್ನು ಕೇಳುತ್ತಿದ್ದೇನೆ'' ಎಂದು ನ್ಯಾ. ಸ್ವರ್ಣ ಕಾಂತ ಶರ್ಮ ಹೇಳಿದರು.

