ನವದೆಹಲಿ: ಗೂಗಲ್ ಪೇ, ಫೋನ್ ಪೇ ಮುಂತಾದ ಯುಪಿಐ ಪಾವತಿಗಳ ಮೇಲೆ ಶುಲ್ಕ ವಿಧಿಸುವ ನಿರ್ಧಾರವನ್ನು ಹಣಕಾಸು ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರಾಗಿ ತಾವು ಬೆಂಬಲಿಸಿದ್ದೇವೆ ಎಂಬ ವಾದವನ್ನು ಕಾಂಗ್ರೆಸ್ ಸಂಸದರಾದ ಗೌರವ್ ಗೊಗೊಯ್ ಮತ್ತು ಮನೀಶ್ ತಿವಾರಿ ತಳ್ಳಿಹಾಕಿದ್ದಾರೆ.
ಸಮಿತಿಯಲ್ಲಿ ಯುಪಿಐ ತೆರಿಗೆ ಪ್ರಸ್ತಾವನೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಗೊಗೊಯ್ ಸ್ಪಷ್ಟಪಡಿಸಿದರೆ, ಸಂಸದೀಯ ಸ್ಥಾಯಿ ಸಮಿತಿಗಳ ಕಲಾಪಗಳನ್ನು ಸರಕಾರ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ.
ಏಕೀಕೃತ ಪಾವತಿ ಇಂಟರ್‌ಫೇಸ್ (ಯುಪಿಐ) ಪಾವತಿಗೆ ವಿವಿಧ ಹಂತಗಳಲ್ಲಿ ಶುಲ್ಕ (ಎಂಡಿಆರ್) ವಿಧಿಸುವ ಪ್ರಸ್ತಾವವನ್ನು ಸಂಸದೀಯ ಸಮಿತಿಯು ಬೆಂಬಲಿಸಿತ್ತು ಎಂಬುದಾಗಿ ಹಿರಿಯ ಸರಕಾರಿ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಗೊಗೊಯ್, ಹಣಕಾಸು ಇಲಾಖೆಯು ಹಣಕಾಸು ಸಮಿತಿಯ ಸದಸ್ಯರನ್ನು ಭೇಟಿ ಮಾಡಿದಾಗ ಅದರ ಬಳಿ ಯುಪಿಐ ತೆರಿಗೆ ಕುರಿತು ಯಾವುದೇ ನಿರ್ದಿಷ್ಟ ಪ್ರಸ್ತಾವನೆ ಇರಲಿಲ್ಲ'' ಎಂದು ಹೇಳಿದರು.
''ಎಂಡಿಆರ್‌ನ ಅಗತ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿತ್ತು. ಆದರೆ ಆ ಸಮಯದಲ್ಲಿ, ಸರಕಾರದ ಪ್ರತಿನಿಧಿಗಳ ಬಳಿ ಯಾವುದೇ ನಿರ್ದಿಷ್ಟ ಅಥವಾ ತೃಪ್ತಿದಾಯಕ ಉತ್ತರಗಳಿರಲಿಲ್ಲ'' ಎಂದು ಗೊಗೊಯ್ ಹೇಳಿದರು.
ಆಗಸ್ಟ್ 12ರಂದು ವರದಿಯನ್ನು ಅಂಗೀಕರಿಸಿದಾಗ ಪಿ. ಚಿದಂಬರಂ, ಮನೀಶ್ ತಿವಾರಿ, ಗೌರವ್ ಗೊಗೊಯ್, ಕಿಶೋರಿ ಲಾಲ್ ಮತ್ತು ಕೆ. ಗೋಪಿನಾಥ್ ಸೇರಿದಂತೆ ಐವರು ಕಾಂಗ್ರೆಸ್ ಸಂಸದರು ಹಾಜರಿದ್ದರು ಹಾಗೂ ಪ್ರಕಟಿತ ಕಲಾಪದ ನಿರ್ಣಯಗಳಲ್ಲಿ ಯಾವುದೇ ಭಿನ್ನಾಭಿಪ್ರಾಯ ದಾಖಲಾಗಿರಲಿಲ್ಲ ಎಂದು ಸರಕಾರಿ ಅಧಿಕಾರಿ ಹೇಳಿದ್ದರು.
''ಅಕ್ಟೋಬರ್ 15ರಿಂದ ಯುಪಿಐ ವಹಿವಾಟುಗಳ ಮೇಲೆ ಎಂಡಿಆರ್ ವಿಧಿಸುವ ಬಗ್ಗೆ ಯಾವುದೇ ನಿರ್ದಿಷ್ಟ ಪ್ರಸ್ತಾವನೆ ಇರಲಿಲ್ಲ. ದರ, ಪ್ರಮಾಣ, ವಿಧಿಸಬೇಕಾದ ಶುಲ್ಕದ ಮೊತ್ತ, ಗರಿಷ್ಠ ಮಿತಿ ಮತ್ತು ವಿನಾಯಿತಿಗಳು ಮುಂತಾದ ಯಾವುದೇ ವಿವರಗಳನ್ನು ಹಣಕಾಸು ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ತಂದಿರಲಿಲ್ಲ'' ಎಂದು ಅವರು ಹೇಳಿಕೊಂಡಿದ್ದಾರೆ.

