ನವದೆಹಲಿ: ಭಾರತ ಆತಿಥ್ಯ ವಹಿಸಿರುವ 18ನೇ 'ಬ್ರಿಕ್ಸ್' ಶೃಂಗಸಭೆಯು ದೆಹಲಿಯ 'ಭಾರತ ಮಂಟಪ'ದಲ್ಲಿ ಇಂದಿನಿಂದ (ಶನಿವಾರ) ಆರಂಭಗೊಂಡಿದೆ.
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದು, ದೆಹಲಿಗೆ ಬಂದಿಳಿದಿದ್ದಾರೆ.
2020ರಲ್ಲಿ ಲಡಾಖ್‌ನ ಗಾಲ್ವಾನ್‌ನಲ್ಲಿ ಭಾರತ ಮತ್ತು ಚೀನಾ ನಡುವೆ ಸೇನಾ ಸಂಘರ್ಷ ನಡೆದಿತ್ತು.
ಬಳಿಕ ಎರಡೂ ದೇಶಗಳ ಸಂಬಂಧ ಹಳಸಿತ್ತು. ಗಾಲ್ವಾನ್ ಸಂಘರ್ಷದ ಬಳಿಕ ಜಿನ್‌ಪಿಂಗ್, ಮೊದಲ ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ.
ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಜಿನ್‌ಪಿಂಗ್ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಸಭೆಯಲ್ಲಿ ಗಡಿ ಸಮಸ್ಯೆ, ವ್ಯಾಪಾರ ಮತ್ತು ಆರ್ಥಿಕ ಸಹಕಾರ ಕುರಿತು ಚರ್ಚೆ ನಡೆಯುವ ನಿರೀಕ್ಷೆ ಇದೆ.
ಭಿನ್ನಾಭಿಪ್ರಾಯಗಳನ್ನು ಸರಿದೂಗಿಸುವ ಮೂಲಕ ಭಾರತದೊಂದಿಗೆ ಸಂವಹನ ಮತ್ತು ಸಹಕಾರವನ್ನು ಬಲಪಡಿಸಲು ಸಿದ್ಧವಿರುವುದಾಗಿ ಚೀನಾ ತಿಳಿಸಿದೆ.
ಉಭಯ ದೇಶಗಳು ಗಡಿ ವಿವಾದ, ಹೆಚ್ಚುತ್ತಿರುವ ವ್ಯಾಪಾರ ಅಸಮತೋಲನ ಸವಾಲುಗಳನ್ನು ಎದುರಿಸುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಜಿನ್‌ಪಿಂಗ್ ಭೇಟಿ ಮಹತ್ವ ಪಡೆದಿದೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ, ಇಂಡೊನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಸೇರಿ 'ಬ್ರಿಕ್ಸ್' ಒಕ್ಕೂಟದ 11 ಸದಸ್ಯ ರಾಷ್ಟ್ರಗಳ ಹಲವು ನಾಯಕರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.

