HEALTH TIPS

ಎನ್‌ಕೌಂಟರ್‌, ಕಲ್ಲು ತೂರಾಟಕ್ಕೆ ಹೆಸರಾಗಿದ್ದ ಕಾಶ್ಮೀರದಲ್ಲೀಗ ಬದಲಾವಣೆಯ ಗಾಳಿ...

ಪುಲ್ವಾಮಾ/ಕುಲ್ಗಾಮ್: ಇಡೀ ಜಗತ್ತು ಹಲವು ದಶಕಗಳಿಂದ ಕಾಶ್ಮೀರವನ್ನು ಎನ್‌ಕೌಂಟರ್‌, ಕರ್ಫ್ಯೂ, ಕಲ್ಲು ತೂರಾಟ, ಬಂದ್‌ ಮತ್ತು ಪ್ರತಿಭಟನೆಗಳಿಂದಾಗಿ ಬಿಕೊ ಎನ್ನುತ್ತಿದ್ದ ರಸ್ತೆಗಳಿಂದಲೇ ನೋಡುತ್ತಾ ಬಂದಿದೆ. ಆದರೆ, ಇದೀಗ ಪರಿಸ್ಥಿತಿ ಬದಲಾಗಿದೆ.


ಕಾಶ್ಮೀರದ ದಕ್ಷಿಣ ಜಿಲ್ಲೆಗಳಾದ ಶೋಪಿಯಾನ್, ಪುಲ್ವಾಮಾ, ಕುಲ್ಗಾಮ್ ಮತ್ತು ಅನಂತನಾಗ್‌ನಲ್ಲಿ ದೈನಂದಿನ ಜೀವನದ ಭಾಗವಾಗಿದ್ದ ಘಟನೆಗಳ ಕುರಿತು ಯಾವುದೇ ವೈಯಕ್ತಿಕ ನೆನಪುಗಳಿಲ್ಲದೆಯೇ ಹದಿಹರೆಯದವರು ಬೆಳೆಯುತ್ತಿದ್ದಾರೆ. 

ಒಂದು ಕಾಲದಲ್ಲಿ ಎನ್‌ಕೌಂಟರ್‌, ಕಲ್ಲು ತೂರಾಟ, ಕರ್ಫ್ಯೂ, ಪ್ರತಿಭಟನೆಗೆ ಸಾಕ್ಷಿಯಾಗಿದ್ದ ಈ ಜಿಲ್ಲೆಗಳಲ್ಲಿ ಇಂದು ಬದಲಾದ ವಾತಾವರಣವನ್ನು ನೋಡಬಹುದಾಗಿದೆ.

ರಸ್ತೆಗಳಲ್ಲಿ ಶಾಲಾ ಮಕ್ಕಳು, ತೆರೆದ ಅಂಗಡಿಗಳು, ಸಾಮಾನ್ಯ ಎಂಬಂತೆ ವಾಹನಗಳ ಸಂಚಾರ, ಸಂಜೆ ವೇಳೆಗೆ ಮೈದಾನಗಳಲ್ಲಿ ಕ್ರಿಕೆಟ್ ಆಡುತ್ತಿರುವ ದೃಶ್ಯಗಳು ಕಾಣಸಿಗುತ್ತಿವೆ. ಆದರೆ, ಇಷ್ಟೇಲ್ಲಾ ಬದಲಾದರೂ ಪೋಷಕರಲ್ಲಿ ಇದೇ ರಸ್ತೆಗಳು ಕರ್ಫ್ಯೂ, ಬಂದ್ ಮತ್ತು ಹಿಂಸಾಚಾರದ ನೆನಪುಗಳನ್ನು ಹೊತ್ತು ತರುತ್ತವೆ.

ಮಕ್ಕಳು ಮತ್ತು ಪೋಷಕರಲ್ಲಿ ನಿಮಗೆ ನೆನಪಿರುವುದೇನು ಎಂದು ಕೇಳಿದಾಗ ಈ ವ್ಯತ್ಯಾಸವು ಸ್ಪಷ್ಟವಾಗಿ ಗೋಚರಿಸುತ್ತದೆ.

ಮಕ್ಕಳಿಗೆ ಗೊತ್ತಿರುವುದು ಕಥೆಯಷ್ಟೆ...!

14 ವರ್ಷದ ಬಾಲಕನನ್ನು ಸಂಘರ್ಷದ ಬಗ್ಗೆ ಕೇಳಿದರೆ, ಹಿರಿಯರು ಹೇಳಿದ ಕಥೆಗಳನ್ನು ಮೆಲುಕು ಹಾಕುತ್ತಾನೆ. 2016ರ ಜುಲೈನಲ್ಲಿ ಕುಲ್ಗಾಮ್‌ನಲ್ಲಿ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯಾದಾಗ ಆತನಿಗೆ ಕೇವಲ ನಾಲ್ಕು ವರ್ಷ. 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿಯ ಅಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದಾಗ ಆತನಿಗೆ ಕೇವಲ ಏಳು ವರ್ಷ.

ನಮ್ಮ ಹಿರಿಯರಿಂದ ಕರ್ಫ್ಯೂ, ಕಲ್ಲು ತೂರಾಟ, ಸ್ವಾತಂತ್ರ್ಯ ಚಳವಳಿ, ಉಗ್ರಗಾಮಿಗಳು ಬಗ್ಗೆ ಕೇಳಿದ್ದೇನೆ ಎಂದು ಯುವಕನೊಬ್ಬ ಹೇಳಿದ್ದಾನೆ. ಆದರೆ, ಆತನ ತಂದೆ ಪರ್ವೇಜ್ ಅಹ್ಮದ್ ಹೇಳುವುದೇ ಬೇರೆ. ಶಾಲೆಗೆ ಹೋಗುವುದೇ ಅನಿಶ್ಚಿತವಾಗಿದ್ದ ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾರೆ.

'ನನ್ನ ಬಾಲ್ಯದಲ್ಲಿ ಶಾಲೆಗಳು ಹೆಚ್ಚಿನ ಸಮಯ ಮುಚ್ಚಿರುತ್ತಿದ್ದವು. ಆದರೆ, ಸದ್ಯದ ಪರಿಸ್ಥಿತಿಯು ನಮ್ಮ ಮಕ್ಕಳು ಆ ರೀತಿ ಕಷ್ಟಪಡದಂತೆ ಮಾಡಿದೆ. ರಾಜಕೀಯ ಕುಂದುಕೊರತೆಗಳು ಉಳಿದಿದ್ದರೂ, ಹಿಂಸಾಚಾರಕ್ಕಿಂತ ಹೆಚ್ಚಾಗಿ ಶಾಂತಿ ನೆಲೆಸಿದೆ' ಎಂದು ಅಹ್ಮದ್ ಹೇಳುತ್ತಾರೆ.

ಅಶಾಂತಿಗೆ ಸಾಕ್ಷಿಯಾಗಿದ್ದ 'ದಕ್ಷಿಣ ಕಾಶ್ಮೀರ'

2016ರ ಅಶಾಂತಿ ಕಾರಣವಾಗಿದ್ದ ಪ್ರದೇಶಗಳಲ್ಲಿ ದಕ್ಷಿಣ ಕಾಶ್ಮೀರವೂ ಒಂದಾಗಿತ್ತು. ಅಧಿಕೃತ ಅಂಕಿಅಂಶಗಳ ಪ್ರಕಾರ ಆ ವರ್ಷ ದಕ್ಷಿಣ ಕಾಶ್ಮೀರದಲ್ಲಿ 875 ಕಲ್ಲು ತೂರಾಟ ಪ್ರಕರಣಗಳು ದಾಖಲಾಗಿದ್ದವು.

ಪುಲ್ವಾಮಾದಲ್ಲಿ 13 ವರ್ಷದ ಬಾಲಕನಿಗೆ ಕಲ್ಲು ತೂರಾಟ, ಎನ್‌ಕೌಂಟರ್‌ ಅಥವಾ ಎಕೆ-47 ಬಂದೂಕಿನ ಬಗ್ಗೆ ಕೇಳಿದಾಗ ಯಾವುದೇ ಉತ್ತರವಿಲ್ಲ. ನನಗೆ ಇದರ ಬಗ್ಗೆ ಕಲ್ಪನೆಯೇ ಇಲ್ಲ ಎಂದು ಹೇಳುತ್ತಾನೆ.

ಕಾಶ್ಮೀರದ ಕುರಿತಾದ ಆತನ ಮೊದಲ ನೆನಪು ಪ್ರತಿಭಟನೆ ಅಥವಾ ಗುಂಡಿನ ಚಕಮಕಿಯದ್ದಲ್ಲ. ಬದಲಾಗಿ, ಸೇಬಿನ ತೋಟಗಳಲ್ಲಿ ಸ್ನೇಹಿತರೊಂದಿಗೆ ಆಡಿದ ಕ್ಷಣಗಳದ್ದು.

ಸಂಜೆಯ ಸಮಯ ಕ್ರಿಕೆಟ್ ಮತ್ತು ಇತರ ಆಟಗಳಿಗೆ ಮೀಸಲು. ಜೀವನದ ಗುರಿಯ ಬಗ್ಗೆ ಕೇಳಿದಾಗ, ನಾನು ಪೈಲಟ್ ಆಗಬೇಕೆಂದು ಹೇಳುತ್ತಾನೆ.

ಮಕ್ಕಳಿಗೆ ಗತಕಾಲದ ಅರಿವಿಲ್ಲ ಎಂದಲ್ಲ. ಅವರು ಅದರ ಬಗ್ಗೆ ಕೇಳುತ್ತಾರೆ. ಆದರೆ, ಒಂದು ಸ್ಥಳವು ಒಂದೊಮ್ಮೆ ಅಪಾಯಕಾರಿಯಾಗಿತ್ತು ಎಂದು ತಿಳಿದುಕೊಳ್ಳುವುದಕ್ಕೂ... ಆ ಅಪಾಯವನ್ನು ಸ್ವತಃ ಅನುಭವಿಸುವುದಕ್ಕೂ ವ್ಯತ್ಯಾಸವಿದೆ.

ಶೋಪಿಯಾನ್‌ನಲ್ಲಿ 2019ರಲ್ಲಿ ಮೊಬೈಲ್ ಇಂಟರ್‌ನೆಟ್‌ ಸೇರಿದಂತೆ ಇತರ ಸಂವಹನ ಸೇವೆಗಳನ್ನು ಸ್ಥಗಿತಗೊಳಿಸಿ ಶಾಲೆಗಳನ್ನು ಮುಚ್ಚಿದ್ದ ಸನ್ನಿವೇಶಗಳನ್ನು 16 ವರ್ಷದ ಯುವಕನೊಬ್ಬ ನೆನಪಿಸಿಕೊಳ್ಳುತ್ತಾನೆ. ಆದರೆ, ಶಿಕ್ಷಕರಾಗಿರುವ ಈತನ ತಂದೆ ಮುಷ್ತಾಕ್ ಅಹ್ಮದ್ ಭಟ್ ಅವರು ಪ್ರಕ್ಷುಬ್ಧ ಪರಿಸ್ಥಿತಿಯನ್ನು ಸ್ಪಷ್ಟವಾಗಿ ನೆನಪಿಸಿಕೊಳ್ಳುವ ಪೀಳಿಗೆಗೆ ಸೇರಿದವರು.

2019ರ ಇಂಟರ್‌ನೆಟ್‌ ಕಡಿತ ಮತ್ತು ಶಾಲಾ ಬಂದ್‌ಗಳು ಕ್ರಮೇಣ ಬದಲಾದವು. ಕೋವಿಡ್ ಸಂದರ್ಭದಲ್ಲಿ ಆನ್‌ಲೈನ್ ತರಗತಿಯಲ್ಲಿ ಕಲಿಯುತ್ತಿದ್ದ ಮಕ್ಕಳು ಕೆಲವೇ ವರ್ಷಗಳಲ್ಲಿ ಶಾಲೆಗಳಿಗೆ ಮರಳಿದರು. ಆ ಬದಲಾವಣೆಯನ್ನು ಸೂರ್ಯಾಸ್ತದ ನಂತರವೂ ಕಾಣಬಹುದಾಗಿದೆ.

ಬದಲಾವಣೆಯ ಗಾಳಿ...

ಈಚೆಗೆ ಪುಲ್ವಾಮಾದಲ್ಲಿ ಫ್ಲಡ್‌ಲೈಟ್‌ಗಳು ಕ್ರಿಕೆಟ್ ಮೈದಾನವನ್ನು ಬೆಳಗಿಸಿದವು. ಎರಡನೇ 'ರಾಯಲ್ ಪ್ರೀಮಿಯರ್ ಲೀಗ್' ರಾತ್ರಿ ಪಂದ್ಯಗಳಿಗಾಗಿ ಜಮ್ಮು ಮತ್ತು ಕಾಶ್ಮೀರದಾದ್ಯಂತ 10 ತಂಡಗಳು ನಗರಕ್ಕೆ ಬಂದಿದ್ದವು.

ಸೆಪ್ಟೆಂಬರ್ 4ರಂದು ನಡೆದ ಫೈನಲ್ ಪಂದ್ಯವು ಸಾವಿರಾರು ಪ್ರೇಕ್ಷಕರನ್ನು ಸೆಳೆಯಿತು, ಕ್ರೀಡಾಂಗಣದ ಸುತ್ತಲೂ ವಾಹನ ಸಂಚಾರಕ್ಕೆ ಅಡ್ಡಿಯಾಗುವಷ್ಟು ಜನಸಂದಣಿ ಇತ್ತು.

ಒಂದು ಕಾಲದಲ್ಲಿ ಬಂದ್‌, ಪ್ರತಿಭಟನೆ ಮತ್ತು ಎನ್‌ಕೌಂಟರ್‌ಗಳಿಂದಾಗಿ ಪದೇ ಪದೇ ಸುದ್ದಿಯಲ್ಲಿದ್ದ ಪುಲ್ವಾಮಾ, ಇದೀಗ ಕ್ರಿಕೆಟ್‌ಗಾಗಿ ರಾತ್ರಿ ಜಾಗರಣೆ ಮಾಡುತ್ತಿತ್ತು.

ಟೂರ್ನಿಯೊಂದಿಗೆ ಗುರುತಿಸಿಕೊಂಡಿರುವ ಪುಲ್ವಾಮಾ ಶಾಸಕ ವಹೀದ್ ಪಾರಾ ಮಾತನಾಡಿ, 'ಇದು ಯುವಜನರಲ್ಲಿ ಬೆಳಕು, ಸಂತೋಷ ಮತ್ತು ಭರವಸೆ ತರುವ ಪ್ರಯತ್ನವಾಗಿದೆ' ಎಂದಿದ್ದಾರೆ.

ಪುಲ್ವಾಮಾ ಸುದ್ದಿ ಮುಖ್ಯಾಂಶಗಳಿಗಿಂತ ಭರವಸೆಯನ್ನು ಆರಿಸಿಕೊಂಡಿದೆ. ಇಲ್ಲಿ ನೆರೆದಿದ್ದ ಜನಸಮೂಹವು ಗುಣಪಡಿಸುವಿಕೆಯ ಅಭಿವ್ಯಕ್ತಿ ಎಂದು ವಹೀದ್ ಬಣ್ಣಿಸಿದ್ದಾರೆ.

ಈ ಕ್ರಿಕೆಟ್ ಪಂದ್ಯವು ಭೂತಕಾಲವನ್ನು ಅಳಿಸಿಹಾಕುವುದಿಲ್ಲ. ಹಾಗೆಯೇ, ರಾಜಕೀಯ ಅಸಮಾಧಾನಗಳು ಅಥವಾ ಭದ್ರತಾ ಆತಂಕಗಳು ಮಾಯವಾಗಿವೆ ಎಂದೂ ಇದರರ್ಥವಲ್ಲ. ಆದರೆ, ಇಂದು ದಕ್ಷಿಣ ಕಾಶ್ಮೀರದಲ್ಲಿ ಮಕ್ಕಳೊಂದಿಗೆ ನಡೆದಾಡಿದರೆ, ಮತ್ತೊಂದು ಬದಲಾವಣೆ ಗೋಚರಿಸುತ್ತದೆ. ಅದನ್ನು ಎನ್‌ಕೌಂಟರ್‌ಗಳು ಅಥವಾ ಕಲ್ಲು ತೂರಾಟದ ಅಂಕಿಅಂಶಗಳು ಸಂಪೂರ್ಣವಾಗಿ ಸೆರೆಹಿಡಿಯಲಾಗದ ಬದಲಾವಣೆ ಅದು.

ಪರ್ವೇಜ್ ಮತ್ತು ಮುಷ್ತಾಕ್ ಅವರಂತಹ ಪೋಷಕರಿಗೆ, ಕಣಿವೆಯ ಆ ಪ್ರಕ್ಷುಬ್ಧ ವರ್ಷಗಳು ಕಣ್ಣ ಮುಂದೆಯೇ ನಡೆದುಹೋದ ಅನುಭವಗಳು. ಆದರೆ, ಅವರ ಮಕ್ಕಳಿಗೆ ಅವು ಕೇವಲ ಕೌಟುಂಬಿಕ ಕಥೆಗಳಷ್ಟೆ..

ಬಹುಶಃ ದಕ್ಷಿಣ ಕಾಶ್ಮೀರದಲ್ಲಿ ನಡೆಯುತ್ತಿರುವ ಅತ್ಯಂತ ಶಾಂತಿಯುತ ಬದಲಾವಣೆಗಳಲ್ಲಿ ಇದೂ ಒಂದಾಗಿದೆ. ಅಲ್ಲಿ ಒಂದು ಹೊಸ ಪೀಳಿಗೆ ಬೆಳೆದು ಬರುತ್ತಿದೆ. ಈ ಪೀಳಿಗೆಗೆ ಸಂಘರ್ಷದ ಪರಿಚಯವಿರುವುದು ಬೀದಿಗಳಲ್ಲಿ ಅದನ್ನು ನೇರವಾಗಿ ಕಂಡಿದ್ದರಿಂದಲ್ಲ. ಬದಲಾಗಿ ಆ ಬೀದಿಗಳಲ್ಲಿ ಹಿಂದೆ ಓಡಾಡಿದ್ದವರ ನೆನಪುಗಳ ಮೂಲಕ ಮಾತ್ರ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries