ನವದೆಹಲಿ/ಮುಂಬೈ: ಫಾಸ್ಟ್‌ಟ್ಯಾಗ್ ಬಳಕೆದಾರರು ತಮ್ಮ ವಾಹನಗಳ ಮೇಲಿನ ಸ್ಟಿಕ್ಕರ್ ಬದಲಾವಣೆ (ಪೋರ್ಟಬಿಲಿಟಿ) ಮಾಡಿಕೊಳ್ಳುವ ಅಗತ್ಯ ವಿಲ್ಲದೆಯೇ, ಫಾಸ್ಟ್‌ಟ್ಯಾಗ್ ನೀಡುವ ಬ್ಯಾಂಕ್‌ಗಳನ್ನು ಬದಲಾಯಿಸಿ ಕೊಳ್ಳಲು ಅವಕಾಶ ನೀಡುವ 'ಒನ್‌ಟ್ಯಾಗ್' ವ್ಯವಸ್ಥೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಚಾಲನೆ ನೀಡಿದ್ದಾರೆ.
ಒನ್‌ಟ್ಯಾಗ್‌ನಿಂದ ವಾಹನಗಳ ಮಾಲೀಕರು ಈಗಾಗಲೇ ಪಡೆದಿರುವ ಫಾಸ್ಟ್‌ಟ್ಯಾಗ್ ಅನ್ನು ಒಂದು ಬ್ಯಾಂಕ್ ನಿಂದ ಮತ್ತೊಂದು ಬ್ಯಾಂಕ್‌ಗೆ ವರ್ಗಾಯಿಸಿಕೊಳ್ಳಬಹುದಾಗಿದೆ. ಇದರಿಂದ ವಾಹನದ ಮೇಲೆ ಅದೇ ಭೌತಿಕ ಫಾಸ್ಟ್‌ಟ್ಯಾಗ್, ಟ್ಯಾಗ್ ಐಡಿ ಮತ್ತು ವಾಹನದ ನೋಂದಣಿ ಸಂಖ್ಯೆ ಉಳಿಸಿಕೊಳ್ಳಬಹುದಾಗಿದೆ.
ಇದುವರೆಗೆ, ಬಳಕೆದಾರರು ಬೇರೆ ಬ್ಯಾಂಕ್‌ನಿಂದ ಫಾಸ್ಟ್‌ಟ್ಯಾಗ್ ಪಡೆಯಬೇಕಾದರೆ, ಈಗಾಗಲೇ ಇರುವ ಫಾಸ್ಟ್‌ಟ್ಯಾಗ್ ಖಾತೆಯನ್ನು ಮುಚ್ಚಿ, ಹೊಸ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಹೊಸ ಭೌತಿಕ ಫಾಸ್ಟ್‌ಟ್ಯಾಗ್ ಅನ್ನು ಪಡೆಯಬೇಕಿತ್ತು.
ಎನ್‌ಎಚ್‌ಎಐನ ರಾಜ್ ಮಾರ್ಗ್‌ಯಾತ್ರಾ ಮೊಬೈಲ್ ಅಪ್ಲಿಕೇಷನ್ ಮೂಲಕ ಗ್ರಾಹಕರು ಈ ಹೊಸ ಸೇವೆ ಪಡೆದುಕೊಳ್ಳಬಹುದಾಗಿದೆ.
₹25 ಸಾವಿರ ಕೋಟಿ ಸಂಗ್ರಹ
'ಫಾಸ್ಟ್‌ಟ್ಯಾಗ್‌ನ ಪೂರ್ಣ ಪ್ರಮಾಣದ ಅನುಷ್ಠಾನದಿಂದ ಪ್ರತಿ ವರ್ಷ ₹25 ಸಾವಿರ ಕೋಟಿವರೆಗೆ ಸಂಗ್ರಹವಾಗಲಿದೆ' ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಫಾಸ್ಟ್‌ಟ್ಯಾಗ್‌ಗಳ ಬಳಕೆಯಿಂದ ಟೋಲ್‌ಗಳ ವರಮಾನವು ವಾರ್ಷಿಕ ಶೇ 10ರಷ್ಟು ಅಥವಾ ₹7 ಸಾವಿರ ಕೋಟಿ ಹೆಚ್ಚಳವಾಗಿದೆ. ತಡೆರಹಿತ ಟೋಲ್‌ನಿಂದ ಹೆಚ್ಚುವರಿಯಾಗಿ ₹8 ಸಾವಿರ ಕೋಟಿವರೆಗೆ ಸಂಗ್ರಹವಾಗಲಿದೆ ಎಂದು 'ಗ್ಲೋಬಲ್ ಫಿನ್‌ಟೆಕ್ ಫೆಸ್ಟ್' ಕಾರ್ಯಕ್ರಮದಲ್ಲಿ ಶುಕ್ರವಾರ ಹೇಳಿದ್ದಾರೆ.
ಈ ಮೊದಲು ಟೋಲ್‌ಗಳ ಕಾರ್ಯಾಚರಣೆ ವೆಚ್ಚ ಶೇ 12ರಷ್ಟಿತ್ತು. ಅದು ಈಗ ಶೇ 2-3ಕ್ಕೆ ಇಳಿದಿದೆ. ಡಿಸೆಂಬರ್ ವೇಳೆಗೆ ದೇಶದಲ್ಲಿನ ಶೇ 70ರಷ್ಟು ಟೋಲ್‌ಗಳು ತಡೆರಹಿತ ಆಗಲಿದ್ದು, ಮುಂದಿನ ವರ್ಷದ ಮಾರ್ಚ್ ವೇಳೆಗೆ ಇದು ಶೇ 100ಕ್ಕೆ ತಲುಪಲಿದೆ ಎಂದಿದ್ದಾರೆ.
ಟೋಲ್‌ಗಳ ಬಳಿ ವಾಹನ ನಿಲುಗಡೆ ಮಾಡದೇ ಪ್ರಯಾಣಿಸುವುದರಿಂದ ವಾಹನಗಳ ಮಾಲೀಕರಿಗೂ ಸಮಯ ಉಳಿತಾಯವಾಗಲಿದೆ. ಅಲ್ಲದೆ, ಇಂಧನ ಉಳಿತಾಯದಿಂದ ವಾರ್ಷಿಕ ₹5,250 ಕೋಟಿಗೂ ಹೆಚ್ಚು ಉಳಿತಾಯ ಆಗಲಿದೆ ಎಂದು ತಿಳಿಸಿದ್ದಾರೆ.

