HEALTH TIPS

ಒಮರ್ ಬಿನ್ ಲಾಡೆನ್: ಅಪ್ಪನ ಉಗ್ರವಾದದ ಛಾಯೆಯಿಂದ ಹೊರಬರಲು ಮಗನ ಅವಿರತ ಯತ್ನ

2001ರ ಇದೇ ದಿನ, ಉಗ್ರರು ಅಪಹರಿಸಿದ್ದ ಎರಡು ವಿಮಾನಗಳು ನ್ಯೂಯಾರ್ಕ್‌ನ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡಗಳಿಗೆ ಅಪ್ಪಳಿಸಿದವು. ಕ್ಷಣಾರ್ಧದಲ್ಲಿ ಬೃಹತ್ ಕಟ್ಟಡಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ, ಒಂದರ ಹಿಂದೆ ಒಂದರಂತೆ ಕುಸಿದು ನೆಲಸಮವಾದವು. ದಟ್ಟ ಹೊಗೆ, ಬೆಂಕಿ, ಅವಶೇಷಗಳ ಅಡಿ ಸಿಲುಕಿದ ಸಾವಿರಾರು ಮಂದಿ ಅಮಾಯಕರು ಜೀವ ಕಳೆದುಕೊಂಡರು.


ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದ ಈ ಭೀಕರ ದಾಳಿಯ ಹಿಂದೆ ಇದ್ದದ್ದು ಅಲ್‌ಖೈದಾ ಉಗ್ರ ಸಂಘಟನೆಯ ನಾಯಕ ಒಸಾಮಾ ಬಿನ್ ಲಾಡೆನ್.

ಆ ದಿನದ ಬಳಿಕ ಒಸಾಮಾ ಬಿನ್ ಲಾಡೆನ್‌ ಎಂಬ ಹೆಸರು ಜಗತ್ತಿನಾದ್ಯಂತ 'ಭಯೋತ್ಪಾದನೆ'ಯ ಸಂಕೇತವಾಗಿ ಗುರುತಿಸಿಕೊಂಡಿತು. ಆದರೆ, ಅದೇ ಹೊತ್ತಿನಲ್ಲಿ ಸೌದಿ ಅರೇಬಿಯಾದಲ್ಲಿದ್ದ ಆತನ ಮಗ ಒಮರ್‌ ಮಾತ್ರ ತಂದೆಯ ಕೃತ್ಯಗಳಾಚೆ, ಜಗತ್ತನ್ನು ಸಂಪೂರ್ಣ ಭಿನ್ನ ದೃಷ್ಟಿಯಿಂದ ನೋಡುತ್ತಿದ್ದ.

'ಮೋಸ್ಟ್‌ ವಾಂಟೆಡ್‌' ಭಯೋತ್ಪಾದಕನ ಮಗನಾಗಿ ಸಾಮಾನ್ಯರಂತೆ ಜೀವನ ಸಾಗಿಸುವುದು ಒಮರ್‌ಗೆ ಸುಲಭವಾಗಿರಲಿಲ್ಲ. ತಾವು ಆ ಹಾದಿ ತುಳಿಯದಿದ್ದರೂ, ಜನರು ಅವರನ್ನು ತಂದೆಯ ನೆರಳಿನಲ್ಲಿಯೇ ನೋಡುತ್ತಿದ್ದರು. ಎಲ್ಲೇ ಹೋದರೂ 'ಭಯೋತ್ಪಾದಕನ ಮಗ' ಎಂಬ ಗುರುತು ಅವರನ್ನು ಹಿಂಬಾಲಿಸುತ್ತಿತ್ತು. ಮಾಧ್ಯಮಗಳ ಕಣ್ಗಾವಲು, ವೀಸಾ ಸಮಸ್ಯೆಗಳು, ಜನರ ಕುತೂಹಲ ಮತ್ತು ಅನುಮಾನಗಳ ನಡುವೆಯೇ ಅವರು ಬದುಕಬೇಕಾಯಿತು.

ತಂದೆಯ ದಾರಿ ಹಿಡಿಯದ ಒಮರ್

ಸೌದಿ ಅರೇಬಿಯಾದಲ್ಲಿ ಜನಿಸಿದ ಒಮರ್‌, ತಮ್ಮ ಬಾಲ್ಯದ ಒಂದಿಷ್ಟು ಸಮಯವನ್ನು ಸುಡಾನ್ ಮತ್ತು ಅಫ್ಗಾನಿಸ್ತಾನದಲ್ಲಿ ಕಳೆದಿದ್ದರು. ತಂದೆಯ ಉಗ್ರ ಚಟುವಟಿಕೆಗಳನ್ನು ಅವರು ಹತ್ತಿರದಿಂದ ಕಂಡಿದ್ದರು. ಆದರೆ, ಎಂದಿಗೂ ತಂದೆಯ ಮಾರ್ಗವನ್ನು ತುಳಿಯಲು ಅವರು ಇಚ್ಛಿಸಲಿಲ್ಲ. ಯುದ್ಧ ಮತ್ತು ರಕ್ತಪಾತದ ಬದುಕಿಗಿಂತ ಸಾಮಾನ್ಯ ಜೀವನವೇ ಉತ್ತಮ ಎಂಬ ನಂಬಿಕೆ ಅವರಲ್ಲಿ ಬೆಳೆದಿತ್ತು.

ಅಲ್‌ಖೈದಾ ಚಟುವಟಿಕೆಗಳಿಂದ ಸಂಪೂರ್ಣ ದೂರ ಉಳಿದಿದ್ದ ಒಮರ್‌, ತಮ್ಮದೇ ಆದ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿದ್ದರು. ತಂದೆಗಿಂತ ತೀರಾ ಭಿನ್ನವಾದ ದೃಷ್ಟಿಕೋನ ಹೊಂದಿದ್ದ ಅವರು, ಸಾಮಾನ್ಯರಂತೆ ಜೀವಿಸಲು ಬಯಸಿದ್ದರು.

ಅಷ್ಟರಲ್ಲೇ ನ್ಯೂಯಾರ್ಕ್‌ನಲ್ಲಿ ತಂದೆ ನಡೆಸಿದ ಭೀಕರ ದಾಳಿಯ ಸುದ್ದಿ ಒಮರ್‌ ಅವರನ್ನು ತಲುಪಿತು. ಈ ವಿಷಯ ತಿಳಿದಾಗ ತಮಗೆ ತೀವ್ರ ನೋವಾಗಿತ್ತು ಎಂದು ಹಲವು ಸಂದರ್ಶನಗಳಲ್ಲಿ ಅವರು ಹೇಳಿಕೊಂಡಿದ್ದಾರೆ. ಈ ಘಟನೆ ಜೀವನವನ್ನು ನೋಡುವ ತಮ್ಮ ದೃಷ್ಟಿಕೋನವನ್ನೇ ಸಂಪೂರ್ಣವಾಗಿ ಬದಲಿಸಿತು ಎಂದೂ ಅವರು ಸ್ಮರಿಸಿದ್ದಾರೆ.

ಬದುಕು ಕೊಟ್ಟ ಕಲೆ

ಕಾಲಕ್ರಮೇಣ ಒಮರ್‌ ತಮ್ಮ ಆಸಕ್ತಿಯನ್ನು ಕಲೆಯತ್ತ ತಿರುಗಿಸಿದರು. ಚಿತ್ರಕಲೆ ಅವರ ಬದುಕಿನ ಪ್ರಮುಖ ಭಾಗವಾಯಿತು. ಮರಳುಗಾಡು, ಪರ್ವತಗಳು... ಹೀಗೆ ಪ್ರಕೃತಿಯ ದೃಶ್ಯಗಳನ್ನು ಆಧರಿಸಿ ಕಲಾಕೃತಿಗಳನ್ನು ರಚಿಸಲು ಆರಂಭಿಸಿದರು. ಅವರ ಚಿತ್ರಗಳಲ್ಲಿ ಏಕಾಂತ ಮತ್ತು ಸ್ವಾತಂತ್ರ್ಯದ ಭಾವನೆಗಳು ಪ್ರಮುಖವಾಗಿ ಮೂಡಿಬರುತ್ತಿದ್ದವು.

ಒಮರ್‌ಗೆ ಚಿತ್ರಕಲೆ ಕೇವಲ ಹವ್ಯಾಸವಾಗಿರಲಿಲ್ಲ; ಅದು ತಂದೆಯ ನೆರಳಿನಿಂದ ಹೊರಬಂದು ಹೊಸ ಗುರುತನ್ನು ನಿರ್ಮಿಸಿಕೊಳ್ಳಲು ನೆರವಾದ ಪ್ರಬಲ ಮಾಧ್ಯಮವಾಗಿತ್ತು. ಜಗತ್ತು ತಮ್ಮನ್ನು ಒಸಾಮಾ ಬಿನ್ ಲಾಡೆನ್‌ನ ಮಗ ಎಂದೇ ನೋಡುತ್ತಿದ್ದರೂ, ತಾವೊಬ್ಬ ಕಲಾವಿದನಾಗಿ ಗುರುತಿಸಿಕೊಳ್ಳಬೇಕು ಎಂಬುದು ಅವರ ಆಶಯವಾಗಿತ್ತು.

ತಂದೆ ಆಯುಧವನ್ನು ಆಯ್ಕೆ ಮಾಡಿಕೊಂಡಿದ್ದರೆ, ಮಗ ಕುಂಚವನ್ನು ಆಯ್ಕೆ ಮಾಡಿಕೊಂಡರು. ತಂದೆಯ ಬದುಕು ಹಿಂಸೆಯೊಂದಿಗೆ ಬೆಸೆದುಕೊಂಡಿದ್ದರೆ, ಮಗನ ಬದುಕು ಕಲೆಯತ್ತ ಹೊರಳಿತ್ತು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries