ತಿರುವನಂತಪುರ : ಸೇತುವೆಯೊಂದರ ಉದ್ಘಾಟನೆಯನ್ನು, ಆ ಕಾಮಗಾರಿಗೆ ಅನುದಾನ ನೀಡಿದ್ದ ಮಾಜಿ ಶಾಸಕ, ಕೇರಳ ಕಾಂಗ್ರೆಸ್ (ಎಂ) ಪಕ್ಷದ ಸೆಬಾಸ್ಟಿಯನ್ ಕುಳತ್ತುಂಗಳ್ ಅವರೇ ನೆರವೇರಿಸುವಂತೆ ಮಾಡಿದ ತಮ್ಮ ಶಾಸಕ ಪೂಂಜಾರ್ ಎಂ.ಜೆ. ಸೆಬಾಸ್ಟಿಯನ್ ಅವರನ್ನು ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಭಾನುವಾರ ಹೊಗಳಿದ್ದಾರೆ.
'ಇದೇ ನಿಜವಾದ ಕೇರಳಂ ಸ್ಟೋರಿ' ಎಂದು ಅವರು 'ಎಕ್ಸ್'ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
'ಅಭಿವೃದ್ಧಿ ಕಾಮಗಾರಿಯೊಂದರ ರಾಜಕೀಯ ಲಾಭ ಪಡೆದುಕೊಳ್ಳಲು ಎಲ್ಲರೂ ಹವಣಿಸುತ್ತಿರುವ ಈ ಹೊತ್ತಿನಲ್ಲಿ ಲಾಭದ ಲೆಕ್ಕಾಚಾರವನ್ನು ಬದಿಗಿಟ್ಟು, ತಮ್ಮ ಕ್ಷೇತ್ರದ ಕಾಮಗಾರಿಯನ್ನು ತಾವೇ ಉದ್ಘಾಟನೆ ಮಾಡದೆ, ಆ ಕಾಮಗಾರಿಗೆ ಅನುದಾನ ನೀಡಿದ ಬೇರೆ ಪಕ್ಷದ ಶಾಸಕರಿಂದ ಉದ್ಘಾಟನೆ ಮಾಡಿಸುವುದು ರಾಜಕೀಯ ಪಕ್ವತೆಗೆ ನೀಡಬಹುದಾದ ಉತ್ತಮ ಉದಾಹರಣೆ' ಎಂದರು.

