ಉಪ್ಪಳ: ಮಂಗಲ್ಪಾಡಿ ಪಂಚಾಯತಿಯ ವಿವಿಧ ವಾರ್ಡ್ ಗಳಲ್ಲಿರುವ ಸರ್ಕಾರಿ ಬಾವಿಯನ್ನು ಅಭಿವೃದ್ದಿಗೊಳಿಸಲು ಕ್ರಮಕೈಗೊಳ್ಳಲಾಗಿದೆ. ವಿವಿಧೆಡೆ ಬಾವಿಗಳು ಶೋಚನೀಯಾವಸ್ಥೆಯಲ್ಲಿದ್ದು, ಸ್ಥಳೀಯರಿಗೆ ನೀರು ಉಪಯೋಗಿಸಲು ಸಾಧ್ಯವಾಗದ ಸ್ಥಿತಿಯಲ್ಲಿತ್ತು. ಈಗಾಗಲೇ ಪುಳಿಕುತ್ತಿ, ಪ್ರತಾಪನಗರ ಸಹಿತ ಹಲವಾರು ವಾರ್ಡುಗಳಲ್ಲಿ ಬಾವಿಗಳ ಅಭಿವೃದ್ದಿ ಕಾರ್ಯಗಳು ನಡೆದಿವೆ. ಬಾವಿಯ ಸುತ್ತುಗೋಡೆ, ನೆಲಕ್ಕೆ ಸಾರಣೆ, ಮೇಲ್ಭಾಗಕ್ಕೆ ಕಬ್ಬಿಣದ ಜಾಲಿಯನ್ನು ಅಳವಡಿಸಿ ನವೀಕರಿಸಲಾಗಿದೆ. ಪುಳಿಕುತ್ತಿ ಐಲ ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನದ ಪರಿಸರದಲ್ಲಿರುವ ಬಾವಿಯ ಶೋಚನೀಯಾವಸ್ಥೆಯ ಬಗ್ಗೆ ಮಾಧ್ಯಮಗಳು ಈ ಹಿಂದೆ ವರದಿ ಮಾಡಿದ್ದವು. ಪಂಚಾಯತಿಯ ನೂತನ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಿಮಾನ್ ಮಂಗಲ್ಪಾಡಿಯನ್ನು ಅಭಿವೃದ್ದಿಗೊಳಿಸಿ ವಿವಿಧ ಸೌಲಭ್ಯಗಳೊಂದಿಗೆ ಉನ್ನತ ಮಟ್ಟಕ್ಕೆ ಏರಿಸಲು ಪ್ರಯತ್ನಿಸುತ್ತಿದ್ದಾರೆ. ಬಾವಿಯನ್ನು ನವೀಕರಿಸಿದ ಈ ಕಾರ್ಯವನ್ನು ಊರವರು ಶ್ಲಾಘಿಸಿದ್ದಾರೆ.

.jpg)
