ನವದೆಹಲಿ (PTI): ಆಗಸ್ಟ್ ತಿಂಗಳಲ್ಲಿ ವಾಹನಗಳ ರಿಟೇಲ್ ಮಾರಾಟವು ಶೇ 17.51ರಷ್ಟು ಬೆಳವಣಿಗೆ ಕಂಡಿದೆ. ಪ್ರಯಾಣಿಕ ವಾಹನ ವಿಭಾಗದಲ್ಲಿ ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿಎನ್‌ಜಿ, ಹೈಬ್ರಿಡ್ ಮತ್ತು ಇ.ವಿ ವಾಹನಗಳ ಮಾರಾಟವು ಪೆಟ್ರೋಲ್ ವಾಹನಗಳ ಮಾರಾಟ ಪ್ರಮಾಣಕ್ಕಿಂತ ಹೆಚ್ಚಾಗಿದೆ.
ಪರ್ಯಾಯ ಇಂಧನಗಳಾದ ಸಿಎನ್‌ಜಿ, ಹೈಬ್ರಿಡ್ ಮತ್ತು ಇ.ವಿ. ವಾಹನಗಳ ಮಾರಾಟವು ಶೇ 41.95ರಷ್ಟು ಇದೆ. ಪೆಟ್ರೋಲ್ ವಾಹನಗಳ ಮಾರಾಟವು ಶೇ 40.85ರಷ್ಟು ಆಗಿದೆ ಎಂದು ಆಟೊಮೊಬೈಲ್ ಡೀಲರ್‌ಗಳ ಸಂಘದ ಒಕ್ಕೂಟ (ಎಫ್‌ಎಡಿಎ) ತಿಳಿಸಿದೆ.
ಕಳೆದ ವರ್ಷದ ಇದೇ ಅವಧಿಗಿಂತ ತುಸು ಹಿಂದೆ ಸಿಎನ್‌ಜಿ, ಹೈಬ್ರಿಡ್ ಮತ್ತು ಇ.ವಿ ಒಳಗೊಂಡ ಪರ್ಯಾಯ ಇಂಧನ ಬಳಸುವ ಪ್ರಯಾಣಿಕ ವಾಹನಗಳ ಮಾರಾಟ ಪ್ರಮಾಣಕ್ಕಿಂತ ಪೆಟ್ರೋಲ್ ಬಳಸುವ ಪ್ರಯಾಣಿಕ ವಾಹನಗಳ ಮಾರಾಟವು ಸರಿಸುಮಾರು ಶೇ 11ರಷ್ಟು ಹೆಚ್ಚಿತ್ತು.
ಜಿಎಸ್‌ಟಿ ದರ ಪರಿಷ್ಕರಣೆ ನಂತರದಲ್ಲಿ ವಾಹನಗಳ ಮಾರಾಟದಲ್ಲಿ ಕಂಡುಬಂದ ಏರಿಕೆಯು ಈಗಲೂ ಮುಂದುವರಿದಿದೆ. ಆಗಸ್ಟ್‌ನಲ್ಲಿ ಒಟ್ಟು 24.23 ಲಕ್ಷ ವಾಹನಗಳ ಮಾರಾಟ ಆಗಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಒಟ್ಟು 20.62 ಲಕ್ಷ ವಾಹನಗಳ ಮಾರಾಟ ಆಗಿತ್ತು.
'ದೇಶದ ಆಟೊಮೊಬೈಲ್ ಮಾರಾಟ ಸಂಖ್ಯೆಯ ವಿಚಾರವಾಗಿ ಹೇಳುವುದಾದರೆ, ಆಗಸ್ಟ್ ತಿಂಗಳ ಅತ್ಯಂತ ಹೆಚ್ಚಿನ ಮಾರಾಟ ಸಂಖ್ಯೆ ಈ ಬಾರಿ ದಾಖಲಾಗಿದೆ' ಎಂದು ಎಫ್‌ಎಡಿಎ ಅಧ್ಯಕ್ಷ ಸಾಯಿ ಗಿರಿಧರ್ ಹೇಳಿದ್ದಾರೆ.
2025ರ ಸೆಪ್ಟೆಂಬರ್‌ನಲ್ಲಿ ಜಿಎಸ್‌ಟಿ ದರವನ್ನು ಕಡಿಮೆ ಮಾಡಿದ ನಂತರದಲ್ಲಿ ವಾಹನ ಉದ್ಯಮ ವಲಯವು ಉತ್ತಮ ಪ್ರಮಾಣದ ಮಾರಾಟವನ್ನು ಕಾಣುತ್ತಿದೆ.
ವಾಡಿಕೆಗೆ ಹೋಲಿಸಿದರೆ ಮುಂಗಾರು ಕೊರತೆಯು ಶೇ 13ರಷ್ಟು ಇದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಪ್ರಯಾಣಿಕ ವಾಹನ ಮಾರಾಟವು ಶೇ 24.99ರಷ್ಟು ಜಾಸ್ತಿ ಆಗಿದೆ ಎಂದು ಗಿರಿಧರ್ ತಿಳಿಸಿದ್ದಾರೆ. ನಗರ ಪ್ರದೇಶಗಳಲ್ಲಿ ಏರಿಕೆ ಪ್ರಮಾಣವು ಶೇ 10.93ರಷ್ಟು ದಾಖಲಾಗಿದೆ. ಆದರೆ ಟ್ರ್ಯಾಕ್ಟರ್‌ಗಳ ಮಾರಾಟದಲ್ಲಿ ಏರಿಕೆ ಕಂಡುಬಂದಿಲ್ಲ.

