ಪ್ಯಾರಿಸ್: ಹಿಂದೂ ಧಾರ್ಮಿಕ ನಿಯೋಗದ ಭೇಟಿಯ ಸಮಯದಲ್ಲಿ ಮಹಿಳಾ ಉದ್ಯೋಗಿಗಳನ್ನು ಆವರಣದಿಂದ ದೂರವಿಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ಯಾರಿಸ್‌ನ ಪ್ರಸಿದ್ಧ ಐಫೆಲ್ ಟವರ್ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಈಫೆಲ್ ಟವರ್ ಅನ್ನು ಸೋಮವಾರ ಬಂದ್ ಮಾಡಲಾಗಿತ್ತು ಎಂದು ವರದಿಯಾಗಿದೆ.
ಈ ಘಟನೆಯ ಕುರಿತು ಪ್ಯಾರಿಸ್ ನಗರ ಆಡಳಿತವು ತನಿಖೆಗೆ ಆದೇಶಿಸಿದೆ.
ಪ್ಯಾರಿಸ್ ಹೊರವಲಯದಲ್ಲಿ ದೇವಾಲಯದ ಉದ್ಘಾಟನೆ ಸಮಾರಂಭಕ್ಕಾಗಿ ಬೋಚಾಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆಗೆ (ಬಿಎಪಿಎಸ್) ಸೇರಿದ 100 ಜನರ ನಿಯೋಗವು ಶನಿವಾರ ಐಫೆಲ್ ಟವರ್‌ಗೆ ಖಾಸಗಿ ಭೇಟಿ ನೀಡಿತ್ತು. ಆಗ ಅಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಗಳನ್ನು ಕಣ್ಣಿಗೆ ಕಾಣಿಸದಂತೆ ದೂರ ತೆರಳಲು ಸೂಚನೆ ನೀಡಲಾಗಿತ್ತು ಎನ್ನಲಾಗಿದೆ.
ಈ ಭೇಟಿಯ ಸಂದರ್ಭದಲ್ಲಿ ಲಿಂಗದ ಆಧಾರದ ಮೇಲೆ ಮಹಿಳಾ ಉದ್ಯೋಗಿಗಳನ್ನು ದೂರವಿಡಲು, ಅವರ ಸ್ಥಾನಕ್ಕೆ ಪುರುಷರನ್ನು ನೇಮಿಸಲು ಸೂಚನೆ ನೀಡಲಾಗಿತ್ತು ಎಂದು ಐಫೆಲ್ ಟವರ್ ಸಿಬ್ಬಂದಿಯಲ್ಲೊಬ್ಬರು ದೂರಿದ್ದಾರೆ.
'ಈ ನಿಯೋಗವನ್ನು ಸ್ವಾಗತಿಸುವ ವೇಳೆ ಮತ್ತು ನಿಯೋಗ ವಾಪಸ್ ಆಗುವವರೆಗೆ ಐಫೆಲ್ ಟವರ್‌ನ ಆವರಣದಲ್ಲಿ ಮಹಿಳಾ ಉದ್ಯೋಗಿಗಳು ಓಡಾಡಬಾರದು ಎಂಬ ಸೂಚನೆ ಇತ್ತು' ಎಂದು ಅವರು ವಿವರಿಸಿದ್ದಾರೆ.
SETE ಕಂಪನಿ ಪ್ರತಿಕ್ರಿಯೆ
ಪ್ಯಾರಿಸ್‌ನ ಈ ಪ್ರಸಿದ್ಧ ಸ್ಮಾರಕವನ್ನು (ಐಫೆಲ್ ಟವರ್) ನಿರ್ವಹಿಸುವ SETE ಕಂಪನಿ ಪ್ರತಿಕ್ರಿಯಿಸಿದ್ದು, ಹಿಂದೂ ನಿಯೋಗವು ಭೇಟಿಯ ವೇಳೆ ಮಹಿಳಾ ಸಿಬ್ಬಂದಿ ಮೇಲೆ ನಿಯಂತ್ರಣ ಹೇರಿದ್ದನ್ನು ಒಪ್ಪಿಕೊಂಡಿದೆ.
ಈ ಷರತ್ತುಗಳು SETEಯ ಮೌಲ್ಯಗಳಿಗೆ ಅಥವಾ ಲಿಂಗ ಸಮಾನತೆಯ ತತ್ವಗಳಿಗೆ ಅನುಗುಣವಾಗಿರಲಿಲ್ಲ. ಇದರ ಪರಿಣಾಮಗಳನ್ನು ಎದುರಿಸಲು ಸಿದ್ಧವಿರುವುದಾಗಿ ಕಂಪನಿ ತಿಳಿಸಿದೆ.
'ಇದು ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲದ ಪದ್ಧತಿಯಾಗಿದೆ. ರಿಪಬ್ಲಿಕನ್ ಮೌಲ್ಯಗಳಿಗೆ ಮತ್ತು ಲಿಂಗ ಸಮಾನತೆಗೆ ಐಫೆಲ್ ಟವರ್‌ನ ಬದ್ಧತೆಯನ್ನು ಪುನರುಚ್ಚರಿಸುತ್ತೇನೆ' ಎಂದು SETE ಅಧ್ಯಕ್ಷ ಏರಿಯಲ್ ವೇಲ್ ತಿಳಿಸಿದ್ದಾರೆ.
ಬಿಎಪಿಎಸ್ ಪ್ರತಿಕ್ರಿಯೆ
ಘಟನೆ ಸಂಬಂಧ ಬೋಚಾಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆಯು (ಬಿಎಪಿಎಸ್) ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಹಿಂದೂಗಳ ಕಳವಳಗಳನ್ನು ನಾವು ಗೌರವಿಸುತ್ತೇವೆ ಮತ್ತು ಘಟನೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ತಿಳಿಸಿದೆ.
'ನಮ್ಮ ನಿಯೋಗದ ಗಾತ್ರವನ್ನು ಪರಿಗಣಿಸಿ, ಇತರ ಸಂದರ್ಶಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಐಫೆಲ್ ಟವರ್ ತಂಡಗಳ ಸಹಯೋಗದೊಂದಿಗೆ ಈ ಭೇಟಿಯನ್ನು ಆಯೋಜಿಸಲಾಗಿತ್ತು. ನಮಗೆ ತಿಳಿದಿರುವಂತೆ, ಯಾವುದೇ ಸಮಯದಲ್ಲಿ ಯಾರಿಗೂ ಐಫೆಲ್ ಟವರ್ ಪ್ರವೇಶವನ್ನು ತಡೆದಿಲ್ಲ' ಎಂದು ಬಿಎಪಿಎಸ್ ಪ್ರಕಟಣೆಯಲ್ಲಿ ತಿಳಿಸಿದೆ.
'ಆದಾಗ್ಯೂ, ಘಟನೆಯಿಂದ ಯಾರಿಗಾದರೂ ನೋವು ಆಗಿದ್ದರೆ ನಾವು ಪ್ರಾಮಾಣಿಕ ಕ್ಷಮೆಯಾಚಿಸುತ್ತೇವೆ ಎಂದೂ ಬಿಎಪಿಎಸ್ ತಿಳಿಸಿದೆ.

