ಕಫರ್ ರುಮ್ಮನ್ (AP): ದಕ್ಷಿಣ ಲೆಬನಾನ್‌ನ ಹಳ್ಳಿಯೊಂದರ ಮೇಲೆ ಇಸ್ರೇಲ್‌ನ ವಾಯುಪಡೆಯು ಸೋಮವಾರ ಬೆಳಿಗ್ಗೆ ನಡೆಸಿದ ಎರಡು ವೈಮಾನಿಕ ದಾಳಿಗಳಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದಾರೆ.
ಎರಡು ತಿಂಗಳ ಹಿಂದೆ ಕದನ ವಿರಾಮ ಏರ್ಪಟ್ಟಿದ್ದರೂ ಇಸ್ರೇಲ್ ಮತ್ತು ಹಿಜ್ಬುಲ್ಲಾ ಬಂಡುಕೋರರ ನಡುವೆ ಉಂಟಾದ ಹೊಸ ಹಂತದ ಉದ್ವಿಗ್ನತೆಯ ಮಧ್ಯೆಯೇ ಈ ದಾಳಿಗಳು ನಡೆದಿವೆ.
ನಬತಿಯೆಹ್ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳು ಹಾಗೂ ಹಲವು ಗ್ರಾಮಗಳ ಮೇಲೆ ನಿಗಾ ಇಡಬಹುದಾದ ಆಯಕಟ್ಟಿನ 'ಅಲಿ ತಾಹೆರ್' ಬೆಟ್ಟವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ಇಸ್ರೇಲ್ ಸೇನೆ ಘೋಷಿಸಿದ ಕೆಲವೇ ದಿನಗಳಲ್ಲಿ ಈ ದಾಳಿಗಳು ನಡೆದಿವೆ.
ಈ ದಾಳಿಯಿಂದ ಕಟ್ಟಡಕ್ಕೆ ಹಾನಿಯಾಗಿದ್ದು, ಒಂದು ಮಗು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದಾರೆ. ನಾಲ್ವರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ 11 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
'ಗ್ರಾಮವೊಂದರಲ್ಲಿ ಕಾರಿನ ಮೇಲೆ ದಾಳಿ ನಡೆದಿದ್ದು, ಲೆಬನಾನ್‌ನ ಇಸ್ಲಾಮಿಕ್ ರಿಸಾಲಾ ಸ್ಕೌಟ್ ಅಸೋಸಿಯೇಷನ್‌ನ ಅರೆ ವೈದ್ಯಕೀಯ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ' ಎಂದು ಮಾಹಿತಿ ನೀಡಿದೆ.

