ಲಂಡನ್ (PTI): 'ಕರ್ಮಭೂಮಿಯೇ ನಿಮ್ಮ ನಿಷ್ಠೆ ಇರುವ ಸ್ಥಳ ಎಂದು ಹಿಂದುತ್ವವು ಸ್ಪಷ್ಟವಾಗಿ ಹೇಳುತ್ತದೆ. ಬ್ರಿಟಿಷ್ ಹಿಂದೂಗಳ ನಿಷ್ಠೆಯು ಬ್ರಿಟನ್ ದೇಶಕ್ಕೆ ಇರಬೇಕು' ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
ಇಲ್ಲಿ ನೆಲಸಿರುವ ದೊಡ್ಡ ಸಂಖ್ಯೆಯ ವಲಸಿಗರು ಹಮ್ಮಿಕೊಂಡಿದ್ದ 'ಏಕತೆಯ ಆಚರಣೆ' ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿಂದೂ ಸ್ವಯಂಸೇವಕ ಸಂಘದ (ಎಚ್‌ಎಸ್‌ಎಸ್) ಸದಸ್ಯರು, ವಿದ್ಯಾರ್ಥಿಗಳು, ಪ್ರಮುಖರು ಪಾಲ್ಗೊಂಡಿದ್ದರು.
ತಪ್ಪು ಕಲ್ಪನೆಗಳನ್ನು ದೂರವಾಗಿಸಲು 'ಹಿಂದುತ್ವ' ಪದವನ್ನು ವ್ಯಾಖ್ಯಾನಿಸಬೇಕು ಎಂಬ ಸಭಿಕರ ಆಶಯಕ್ಕೆ ಉತ್ತರವಾಗಿ ಅವರು, 'ಬ್ರಿಟಿಷ್ ಹಿಂದೂಗಳು ಉತ್ತಮ, ಸಶಕ್ತ ಮತ್ತು ನಿಜವಾದ ಹಿಂದೂಗಳಾಗಿದ್ದರೆ ಜನ್ಮಭೂಮಿ ಭಾರತ ಮತ್ತು ಕರ್ಮಭೂಮಿ ಬ್ರಿಟನ್‌ನ ಹಿತಾಸಕ್ತಿಗಳಲ್ಲಿ ಎಂದಿಗೂ ಸಂಘರ್ಷ ಎದುರಾಗುವುದಿಲ್ಲ' ಎಂದು ಪ್ರತಿಪಾದಿಸಿದರು.
'ಒಂದೊಮ್ಮೆ ಸಂಘರ್ಷದ ಸ್ಥಿತಿ ಎದುರಾದರೆ ಬ್ರಿಟಿಷ್ ಹಿಂದೂಗಳು ಖಂಡಿತವಾಗಿಯೂ ಬ್ರಿಟನ್ ಜೊತೆಗೆ ನಿಲ್ಲುತ್ತಾರೆ. ಕೆಲವು ಅಪವಾದಗಳು ಇರಬಹುದು; ಆದರೆ, ನಿಮ್ಮ ನಿಷ್ಠೆ ಯಾವುದರಲ್ಲಿದೆಯೋ ಅದೇ ಕರ್ಮಭೂಮಿ ಎಂದು ಹಿಂದುತ್ವವು ಸ್ಪಷ್ಟವಾಗಿ ಹೇಳುತ್ತದೆ. ಹೀಗಾಗಿ ನಿಮ್ಮ ಕರ್ಮಭೂಮಿಗೆ ದ್ರೋಹ ಬಗೆಯಿರಿ ಎಂದು ಹಿಂದುತ್ವವು ಎಂದಿಗೂ ಹೇಳುವುದಿಲ್ಲ' ಎಂದು ಅವರು ವಿವರಿಸಿದರು.
'ಹಿಂದೂ ಪದವನ್ನು ಯಾವುದೇ ಧಾರ್ಮಿಕ ಆಚರಣೆ ಅಥವಾ ಜೀವನ ವಿಧಾನದ ಮೇಲೆ ಅರ್ಥೈಸಲು ಸಾಧ್ಯವಿಲ್ಲ. ಅದೊಂದು ಸ್ವಭಾವ. ಆ ಸ್ವಭಾವವನ್ನು ಹೊಂದಿರುವ ಸಮಾಜವು ವೈವಿಧ್ಯವನ್ನು ಸ್ವೀಕರಿಸಬೇಕು ಮತ್ತು ಗೌರವಿಸಬೇಕು. ಏಕೆಂದರೆ, ಎಲ್ಲ ಮಾರ್ಗಗಳೂ ಕರೆದೊಯ್ಯುವುದು ಒಂದೇ ಗುರಿಯತ್ತ ಎಂದು ಅದು ಹೇಳುತ್ತದೆ' ಎಂದು ಪ್ರತಿಪಾದಿಸಿದರು.
'ನಾವು ಬೇರೆ ಬೇರೆ ಆಗಬೇಕಿಲ್ಲ. ಒಂದಾಗಿ ಮುನ್ನಡೆಯಬಹುದು, ಒಂದಾಗಿ ಕಾರ್ಯನಿರ್ವಹಿಸಬಹುದು. ನಾವು ಮಾಡಬೇಕಿರುವುದು ಅದನ್ನೇ. ಅದೇ ಹಿಂದುತ್ವ' ಎಂದು ಹೇಳಿದರು.
'ಹಿಂದೂ ರಾಷ್ಟ್ರ' ಪರಿಕಲ್ಪನೆಯನ್ನು ವಿವರಿಸಿದ ಅವರು, 'ಹಿಂದೂ ರಾಷ್ಟ್ರದ ಉದ್ದೇಶ ಏನಿತ್ತು? ವೈವಿಧ್ಯವು ಪ್ರಕೃತಿಸಹಜ, ಏಕತೆಯೊಂದೇ ನಿಜ. ಅದರಿಂದಲೇ ಜಗಕ್ಕೆ ಒಳಿತು ಎಂದು ಸಾರುವುದೇ ಆಗಿತ್ತು' ಎಂದರು.
'ಆರ್‌ಎಸ್‌ಎಸ್ ಸೇವೆಯ ನೆಲೆಯಲ್ಲಿ ನಿಂತಿದೆ. ಈ ತತ್ವದ ಆಧಾರದಲ್ಲಿ ಉತ್ತಮ ಪ್ರಪಂಚಕ್ಕಾಗಿ ಭವಿಷ್ಯದ ಜನಾಂಗವು ಕೆಲಸ ನಿರ್ವಹಿಸುತ್ತದೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

