ಭುವನೇಶ್ವರ (PTI): ಒಡಿಶಾದ ಬಾಲೇಶ್ವರ ಜಿಲ್ಲೆಯ ಭುವನೇಶ್ವರ- ಕೋಲ್ಕತ್ತ ಹೆದ್ದಾರಿ ಬಳಿಯ ವಿಚಿತ್ರಪುರ ಮ್ಯಾಂಗ್ರೋವ್ ಅಭಯಾರಣ್ಯದಲ್ಲಿನ ಗಾಳಿಮರಗಳ ನೆಡುತೋಪಿನಲ್ಲಿ ಐದು ಒರಾಂಗುಟಾನ್ (ನರವಾನರ) ಮರಿಗಳು ಮಂಗಳವಾರ ಪತ್ತೆಯಾಗಿವೆ. ಒರಾಂಗುಟಾನ್ ಮಲೇಷ್ಯಾ, ಇಂಡೊನೇಷ್ಯಾ ಮತ್ತು ಬೋರ್ನಿಯೊ ದ್ವೀಪಗಳ ಅರಣ್ಯಗಳಲ್ಲಿ ಮಾತ್ರವೇ ಕಾಣಸಿಗುವ ಪ್ರಾಣಿಯಾಗಿದೆ.
ಈ ಬಗ್ಗೆ ಒಡಿಶಾದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮತ್ತು ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೊ (ಡಬ್ಲ್ಯುಸಿಸಿಬಿ) ಜಂಟಿಯಾಗಿ ತನಿಖೆ ಆರಂಭಿಸಿವೆ. ರಾಜ್ಯದ ಅರಣ್ಯ ಮತ್ತು ಪರಿಸರ ಸಚಿವ ಗಣೇಶ್ ರಾಮ್ ಸಿಂಘ್‌ಕುಟಿಯಾ ಅವರು ಈ ಕುರಿತು ಬುಧವಾರ ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಅಂತರರಾಷ್ಟ್ರೀಯ ವನ್ಯಜೀವಿ ಕಳ್ಳಸಾಗಣೆ ಜಾಲವು ಈ ಘಟನೆಯ ಹಿಂದೆ ಇರಬಹುದು, ಮರಿಗಳನ್ನು ಪಶ್ಚಿಮ ಬಂಗಾಳದಿಂದ ಒಡಿಶಾಕ್ಕೆ ತಂದಿರಬಹುದು ಎಂದು ಶಂಕಿಸಲಾಗಿದೆ. ಬಾಳೆಹಣ್ಣು ಇರುವ ಬುಟ್ಟಿಗಳ ಬಳಿ ಮರಿಗಳು ಇರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
'ಮರಿಗಳನ್ನು ರಕ್ಷಿಸಿ ಭುವನೇಶ್ವರದ ನಂದನಕಾನನ ಮೃಗಾಲಯದಲ್ಲಿ ಪ್ರತ್ಯೇಕವಾಸದಲ್ಲಿ ಇರಿಸಲಾಗಿದೆ. ಪಶುವೈದ್ಯರ ತಂಡವು ಮರಿಗಳ ಆರೋಗ್ಯದ ಮೇಲೆ ನಿಗಾ ಇರಿಸಿದ್ದು, ಅವುಗಳ ಆರೋಗ್ಯ ಸ್ಥಿರವಾಗಿದೆ. ಜೊತೆಗೆ, ಅವುಗಳನ್ನು ಹವಾನಿಯಂತ್ರಿತ ವಾತಾವರಣದಲ್ಲಿ ಇರಿಸಲಾಗಿದೆ' ಎಂದು ಸಚಿವ ಗಣೇಶ್ ತಿಳಿಸಿದರು.
* ಐದರಲ್ಲಿ ಮೂರು ಗಂಡು ಮತ್ತು ಎರಡು ಹೆಣ್ಣು ಮರಿಗಳಾಗಿವೆ. ಇವುಗಳ ವಯಸ್ಸು ಸುಮಾರು 6 ತಿಂಗಳಿನಿಂದ ಒಂದು ವರ್ಷದವರೆಗೆ ಇದೆ. ಇವುಗಳಿಗೆ ಆಹಾರ ಮತ್ತು ಒಆರ್‌ಎಸ್ ನೀಡಲಾಗುತ್ತಿದೆ- ನಂದನಕಾನನ ಮೃಗಾಲಯ
* ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಒರಾಂಗುಟಾನ್‌ಗೆ ₹20 ಲಕ್ಷದಿಂದ ₹25 ಲಕ್ಷ ಬೆಲೆ ಇದೆ
* 'ನಿಮ್ಮ ಮೃಗಾಲಯಗಳಲ್ಲಿ ಒರಾಂಗುಟಾನ್‌ಗಳು ಕಾಣೆಯಾಗಿವೆಯೇ ಎಂಬ ಬಗ್ಗೆ ಮಾಹಿತಿ ನೀಡಿ' ಎಂದು ಒಡಿಶಾ ಅರಣ್ಯ ಇಲಾಖೆಯು ದೇಶದಾದ್ಯಂತ ಇರುವ ಮೃಗಾಲಯಗಳಿಗೆ ಸಂದೇಶ ಕಳುಹಿಸಿದೆ
* ಅಸ್ಸಾಂ ಮತ್ತು ಮಿಜೋರಾಂ ಗಡಿಯಲ್ಲಿ 2022ರಲ್ಲಿ ಎರಡು ಮರಿಗಳು ಪತ್ತೆಯಾಗಿದ್ದವು. ಮ್ಯಾನ್ಮಾರ್‌ನಿಂದ ಭಾರತಕ್ಕೆ ಇವುಗಳನ್ನು ಕಳ್ಳಸಾಗಣೆ ಮಾಡಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದರು
ಸ್ಥಳೀಯರಿಂದ ಮಾಹಿತಿ ಮರಿಯೊಂದು ಮರದ ಮೇಲೆ ಕುಳಿತಿದ್ದುದನ್ನು ಮಂಗಳವಾರ ಬೆಳಿಗ್ಗೆ ನೋಡಿದ ಸ್ಥಳೀಯರೊಬ್ಬರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸೋಮವಾರ ರಾತ್ರಿ ಕಪ್ಪು ಬಣ್ಣದ ಮಹೀಂದ್ರಾ ಥಾರ್ ಕಾರೊಂದು ನೆಡುತೋಪಿನ ಬಳಿಯ ಹೆದ್ದಾರಿಯಲ್ಲಿ ಹೋಗಿದ್ದನ್ನೂ ಸ್ಥಳೀಯರು ಕಂಡಿದ್ದಾರೆ. 'ಸ್ಥಳೀಯರ ಈ ಮಾಹಿತಿಯು ತನಿಖೆಗೆ ಮಹತ್ವದ ಸುಳಿವಾಗಿದೆ. ಇದೇ ಕಾರು ಹಲವು ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿಯೂ ಸೆರೆಯಾಗಿದೆ' ಎಂದು ಪೊಲೀಸರು ಹೇಳಿದ್ದಾರೆ. ಇದೇ ಕಾರಣಕ್ಕೆ ಅರಣ್ಯ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಮನೆ ಮನೆಗೆ ತೆರಳಿ ಮಾಹಿತಿ ಕಲೆಹಾಕುತ್ತಿದ್ದಾರೆ. ವಿಮಾನ ಹಡಗು ಅಥವಾ ರೈಲಿನ ಮೂಲಕ ಮರಿಗಳನ್ನು ಭಾರತಕ್ಕೆ ತಂದಿರಬಹುದು ಎಂದು ತನಿಖಾ ತಂಡ ಶಂಕಿಸಿದೆ. ಈ ಕಾರಣದಿಂದ ವಿಮಾನ ನಿಲ್ದಾಣ ಬಂದರು ಮತ್ತು ಪ್ರಮುಖ ರೈಲು ನಿಲ್ದಾಣಗಳ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
'ತಾಯಂದಿರನ್ನು ಕೊಂದಿರಬಹುದು' 'ತಾಯಂದಿರನ್ನು ಹತ್ಯೆ ಮಾಡಿಯೇ ಈ ಮರಿಗಳನ್ನು ಹೊತ್ತು ತಂದಿರುವ ಸಾಧ್ಯತೆ ಇದೆ. ಇಲ್ಲವೇ ಮರಿಗಳನ್ನು ಮೊದಲೇ ಅಪಹರಿಸಿ ಬಂಧನದಲ್ಲಿ ಬೆಳೆಸಿರಬಹುದು' ಎಂದು ಹ್ಯುಮೇನ್ ವರ್ಲ್ಡ್ ಫಾರ್ ಅನಿಮಲ್ಸ್- ಇಂಡಿಯಾ (ಎಚ್‌ಡಬ್ಲ್ಯುಎಐ) ಹೇಳಿದೆ. 'ಮರಿಗಳು ಹೀಗೆ ದೊರೆತಿರುವುದು ಕಳವಳಕಾರಿ. ಯಾಕೆಂದರೆ ಸಾಮಾನ್ಯವಾಗಿ ಮರಿಯು ಹಲವು ವರ್ಷಗಳವರೆಗೆ ತಾಯಿಯ ಜೊತೆಯಲ್ಲಿಯೇ ಇರುತ್ತದೆ. ಸ್ವತಂತ್ರವಾಗಿ ಬದುಕಲು ತನ್ನ ಮರಿ ಶಕ್ತವಾಗಿದೆ ಎಂದು ಅನ್ನಿಸುವವರೆಗೂ ತಾಯಿಯು ಮರಿಯನ್ನು ಬಿಟ್ಟು ಹೋಗುವುದಿಲ್ಲ. ಜೊತೆಗೆ 8 ವರ್ಷಕ್ಕೆ ಒಮ್ಮೆಯಷ್ಟೇ ಒಂದು ಮರಿಯನ್ನು ಹೆಣ್ಣು ಒರಾಂಗುಟಾನ್‌ಗಳು ಹೆರುತ್ತವೆ' ಎಂದು ವನ್ಯಜೀವಿ ತಜ್ಞ ವಿಸ್ವಜಿತ್ ಮೊಹಂತಿ ಹೇಳಿದ್ದಾರೆ ಎಂದು 'ಬಿಬಿಸಿ' ವರದಿ ಮಾಡಿದೆ.
ಸುಮಂತ್ ಬಿಂದುಮಾಧವ್, ನಿರ್ದೇಶಕ ಹ್ಯುಮೇನ್ ವರ್ಲ್ಡ್ ಫಾರ್ ಅನಿಮಲ್ಸ್- ಇಂಡಿಯಾಭಾರತದಲ್ಲಿ ಒರಾಂಗುಟಾನ್ ಮರಿಗಳು ದೊರೆತಿರುವುದು ಇದೇ ಮೊದಲೇನಲ್ಲ. ಬಂಧನದಲ್ಲಿ ಇಟ್ಟುಕೊಂಡು ಸಾಕಬಾರದಂಥ ಪ್ರಾಣಿಗಳನ್ನು ಖಾಸಗಿಯವರು ಸಾಕಬಾರದು ಎಂಬ ಯಾವುದೇ ಕಾನೂನು ಭಾರತದಲ್ಲಿ ಇಲ್ಲ.

