ನವದೆಹಲಿ: ದೇಶವನ್ನು 'ವಿಕಸಿತ ಭಾರತ' ವನ್ನಾಗಿ ಪರಿವರ್ತಿಸುವಲ್ಲಿ ಯುವಶಕ್ತಿಯೇ ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
20ನೇ ʼರೋಜ್‌ಗಾರ್ ಮೇಳʼದ ಅಂಗವಾಗಿ 51 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ವರ್ಚುವಲ್ ಆಗಿ ನೇಮಕ ಪತ್ರ ವಿತರಿಸಿ ಅವರು ಮಾತನಾಡಿದರು.
ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ಸರ್ಕಾರ ಬದ್ಧವಾಗಿದೆ. ದೇಶದಲ್ಲೆಡೆ ಉದ್ಯೋಗಾವಕಾಶ ಹೆಚ್ಚಿಸಲು ಎಲ್ಲಾ ಮಟ್ಟದಲ್ಲೂ ಕೆಲಸ ಮಾಡುತ್ತಿದೆ. ಭಾರತೀಯ ಯುವಕರ ಪ್ರತಿಭೆ ಮತ್ತು ಕೌಶಲ್ಯ ಜಾಗತಿಕ ಮಟ್ಟದಲ್ಲಿ ದೊಡ್ಡ ಭರವಸೆಯನ್ನು ಮೂಡಿಸಿದೆ. ಪ್ರಪಂಚವು ಇಂದು ಭಾರತದ ನಾವೀನ್ಯಕಾರರು ಹಾಗೂ ಉದ್ಯಮಿಗಳ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ ಎಂದು ಮೋದಿ ಹೇಳಿದ್ದಾರೆ.
ವಿವಿಧ ದೇಶಗಳೊಂದಿಗೆ ಭಾರತ ಮಾಡಿಕೊಳ್ಳುತ್ತಿರುವ 'ಉಚಿತ ವ್ಯಾಪಾರ ಒಪ್ಪಂದಗಳು' ಯುವಜನತೆಗೆ ನೂತನ ಉದ್ಯೋಗ ಮತ್ತು ವೃತ್ತಿಪರ ಅವಕಾಶಗಳನ್ನು ತೆರೆದಿಡುತ್ತಿವೆ. ಭಾರತವು ಪ್ರಸ್ತುತ ವಿಶ್ವದಲ್ಲೇ 3ನೇ ಅತಿದೊಡ್ಡ ಸ್ಟಾರ್ಟ್‌ಅಪ್ ವ್ಯವಸ್ಥೆಯನ್ನು ಹೊಂದಿದೆ. ವಿಶೇಷವೆಂದರೆ, ಈಗ ಶೇ 50ರಷ್ಟು ಮಾನ್ಯತೆ ಪಡೆದ ಸ್ಟಾರ್ಟ್‌ಅಪ್‌ಗಳು ಸಣ್ಣ ನಗರಗಳಲ್ಲೂ ಸಕ್ರಿಯವಾಗಿವೆ ಎಂದಿದ್ದಾರೆ.
ಬದಲಾಗುತ್ತಿರುವ ಆರ್ಥಿಕತೆಗೆ ಅನುಗುಣವಾಗಿ ಯುವಕರ ಶಿಕ್ಷಣ ಮತ್ತು ಕೌಶಲ್ಯಗಳನ್ನು ನವೀಕರಿಸಲು ಸರ್ಕಾರ ಆದ್ಯತೆ ನೀಡುತ್ತಿದೆ. ಇದಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ, 'ಸ್ಕಿಲ್ ಇಂಡಿಯಾ ಮಿಷನ್', ಮತ್ತು 'ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ'ಯಂತಹ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರಲಾಗುತ್ತಿದೆ ಎಂದೂ ಹೇಳಿದ್ದಾರೆ.
ಸರ್ಕಾರಿ ಸೇವೆಗೆ ಹೊಸದಾಗಿ ಸೇರ್ಪಡೆಗೊಳ್ಳುತ್ತಿರುವ ಯುವಕರು ಸ್ವಾವಲಂಬಿ ಮತ್ತು ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದಲ್ಲಿ ಮುಖ್ಯ ಪಾತ್ರ ವಹಿಸಬೇಕು. ಸಾರ್ವಜನಿಕ ಸೇವೆ ಒದಗಿಸುವಾಗ ಪ್ರಾಮಾಣಿಕತೆ, ವೇಗ ಮತ್ತು ಕರ್ತವ್ಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ದೇಶದ ಪ್ರಜೆಗಳಿಗೆ ಸೇವೆ ಸಲ್ಲಿಸಬೇಕೆಂದು ಮೋದಿ ಕರೆ ನೀಡಿದ್ದಾರೆ.

