ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಗೆ ಹೊಂದಿಕೊಂಡಿರುವ ಗುರೇಜ್ ಕಣಿವೆಯಲ್ಲಿ 'ಧ್ಯಾನ ಶಿಬಿರ' ಆಯೋಜಿಸಿರುವುದು ಕಣಿವೆ ರಾಜ್ಯದಲ್ಲಿ ರಾಜಕೀಯ ಹಾಗೂ ಧಾರ್ಮಿಕ ವಿವಾದಕ್ಕೆ ಕಾರಣವಾಗಿದೆ.
ಸರ್ಕಾರವು ಈ ವಿಚಾರದಲ್ಲಿ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ವಿರೋಧ ಪಕ್ಷದ ನಾಯಕಿ, ಪಿಡಿಪಿ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹಾಗೂ ಹುರಿಯತ್ ಕಾನ್ಫರೆನ್ಸ್‌ನ ಮುಖ್ಯಸ್ಥ ಮಿರ್ವೈಜ್ ಉಮರ್ ಫಾರೂಕ್ ಒತ್ತಾಯಿಸಿದ್ದಾರೆ.
'ಮೌನದಲ್ಲಿ ತಂತ್ರ-ಒಳಗಿನ ಪ್ರಯಾಣ' ಹೆಸರಿನಲ್ಲಿ ಸೆಪ್ಟೆಂಬರ್ 24ರಿಂದ 27ರವರೆಗೆ ನಾಲ್ಕು ದಿನದ ಕಾರ್ಯಕ್ರಮದ ಕುರಿತಾದ ಜಾಹೀರಾತನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಉತ್ತರ ಕಾಶ್ಮೀರದಲ್ಲಿ ಬಂಡಿಪೊರಾ ಜಿಲ್ಲೆಯ ಗುರೇಜ್ ಕಣಿವೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಪ್ರಚಾರ ಸಾಮಗ್ರಿಗಳಲ್ಲಿ 'ಸ್ಯಾಮಿ ಧ್ಯಾನ್' ಸಭೆ ಎಂದು ಕರೆದಿದ್ದು, ಧ್ಯಾನ, ಧ್ವನಿ ಚಿಕಿತ್ಸೆ, ಆಂತರಿಕ ಜೀವನ ಹಾಗೂ ಮನಸ್ಸಿನ ಆತಂರಿಕ ರೂಪಾಂತರವನ್ನು ಕಲಿಸಿಕೊಡಲಾಗುತ್ತದೆ ಎಂದು ತಿಳಿಸಿದೆ.
ಆಹಾರ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಇದರಲ್ಗಿ ಭಾಗವಹಿಸುವವರು ತಲಾ ₹11,995 ಪಾವತಿಸಬೇಕು ಎಂದು ಕರಪತ್ರಗಳಲ್ಲಿ ತಿಳಿಸಲಾಗಿದೆ.
'ಆಧ್ಯಾತ್ಮಿಕತೆ ಹಾಗೂ ಪ್ರವಾಸೋದ್ಯಮದ ಹೆಸರಿನಲ್ಲಿ ಗುರೇಜ್ ಕಣಿವೆಯನ್ನು ಪ್ರಯೋಗದ ಮೈದಾನವಾಗಿ ಪರಿವರ್ತಿಸಬಾರದು. ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹಾಗೂ ರಾಜ್ಯ ಪೊಲೀಸರು ಕೂಡಲೇ ಮಧ್ಯಪ್ರವೇಶಿಸಬೇಕು' ಎಂದು ಮೆಹಮೂಬಾ ಮುಫ್ತಿ ಅವರು 'ಎಕ್ಸ್'ನಲ್ಲಿ ಮನವಿ ಮಾಡಿದ್ದಾರೆ.
ಕಾರ್ಯಕ್ರಮದ ವಿಚಾರದಲ್ಲಿ ನಾಸೀರ್-ಉಲ್-ಇಸ್ಲಾಂ ಅವರು ಜಾಗೃತಿ ಮೂಡಿಸಬೇಕು ಮಿರ್ವೈಜ್ ಹಾಗೂ ಮುಫ್ತಿ ಎಂದು ಕರೆನೀಡಿದ್ದಾರೆ. ಮುಫ್ತಿ ಅವರ ಕಳವಳವನ್ನು ಬೆಂಬಲಿಸಿರುವ ಮಿರ್ವೈಜ್, ಈ ಕಾರ್ಯಕ್ರಮದ ಕುರಿತಂತೆ ಸರ್ಕಾರವು ಕೂಡಲೇ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.
'ಪ್ರವಾಸೋದ್ಯಮದ ಹೆಸರಿನಲ್ಲಿ ಕಾಶ್ಮೀರದ ಧಾರ್ಮಿಕತೆ, ಸಂಸ್ಕೃತಿ ಹಾಗೂ ಸಾಮಾಜಿಕ ಸೂಕ್ಷ್ಮ ವಿಚಾರಗಳನ್ನು ನಿರ್ಲಕ್ಷಿಸಬಾರದು' ಎಂದು ಮಿರ್ವೈಜ್ ಒತ್ತಾಯಿಸಿದ್ದಾರೆ.
ಕಳೆದ ವರ್ಷ ಗೋವಾದಲ್ಲಿ 'ಧ್ಯಾನ ಶಿಬಿರ' ಆಯೋಜಿಸಲು ಮುಂದಾದಾಗ ಭಾರಿ ವಿರೋಧ ವ್ಯಕ್ತವಾಗಿತ್ತು. ನಾಗರಿಕ ಸಮಾಜದ ಸಂಘಟನೆಗಳು ಹಾಗೂ ಕ್ಯಾಥೊಲಿಕ್ ಸಂಘಟನೆಗಳು ಭಾರಿ ವಿರೋಧ ವ್ಯಕ್ತಪಡಿಸಿದ ಕಾರಣ ಕಾರ್ಯಕ್ರಮ ನಡೆಸದಂತೆ ಗೋವಾ ಪೊಲೀಸರು ಆಯೋಜಕರಿಗೆ ನಿರ್ದೇಶನ ನೀಡಿದ್ದರು.
ಇದಾದ ಬಳಿಕ ಆಯೋಜಕರು ಕಾರ್ಯಕ್ರಮವನ್ನೇ ರದ್ದುಗೊಳಿಸಿದ್ದರು. ಅಧ್ಯಾತ್ಮದ ಹೆಸರಿನಲ್ಲಿ ಗುರೇಜ್ ಕಣಿವೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ರದ್ದುಗೊಳಿಸಿರುವ ಕುರಿತು ಇದುವರೆಗೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
ಕಳೆದ ವರ್ಷ ಗುಲ್‌ಮಾರ್ಗ್‌ನಲ್ಲಿ ರಂಜಾನ್ ಪವಿತ್ರ ಮಾಸಾಚರಣೆ ವೇಳೆ ಫ್ಯಾಶನ್ ಶೋ ಆಯೋಜಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಗುರೇಜ್ ಕಣಿವೆಯಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮ ಹೆಚ್ಚು ಖ್ಯಾತಿ ಗಳಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಧ್ಯಾನ ಶಿಬಿರವನ್ನು ಆಯೋಜಿಸಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.

