ನವದೆಹಲಿ: ರಷ್ಯಾದಿಂದ ತೈಲ ಖರೀದಿ ಮಾಡುವ ರಾಷ್ಟ್ರಗಳ ಮೇಲೆ ಸುಂಕ ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಧಿಕಾರ ಕಲ್ಪಿಸುವ ರಷ್ಯಾ ನಿರ್ಬಂಧ ಮಸೂದೆಗೆ ಅಮೆರಿಕ ಸಂಸತ್ ಒಪ್ಪಿಗೆ ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಭಾರತ ಪ್ರತಿಕ್ರಿಯಿಸಿದೆ.
ಅಲ್ಲದೆ, ವಿವಿಧ ಪೂರೈಕೆದಾರರಿಂದ ತೈಲ ಖರೀದಿಯನ್ನು ಮುಂದುವರಿಸುವುದಾಗಿಯೂ ಹೇಳಿದೆ.
ಈ ಬಗ್ಗೆ ಎಕ್ಸ್ನಲ್ಲಿ ಟಿಪ್ಪಣಿ ಪ್ರಕಟಿಸಿರುವ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್, '140 ಕೋಟಿ ಜನರ ಇಂಧನ ಭದ್ರತೆಯನ್ನು ಕಾಪಿಟ್ಟುಕೊಳ್ಳಲು ಭಾರತ ಬದ್ಧವಾಗಿದೆ' ಎಂದು ಹೇಳಿದ್ದಾರೆ.
'ವಿವಿಧ ಮೂಲಗಳಿಂದ ಖರೀದಿ ಮುಂದುವರಿಸುವುದು ಹಾಗೂ ಮಾರುಕಟ್ಟೆಯ ಪರಿಸ್ಥಿತಿಗೆ ಅನುಗುಣವಾಗಿ ಈ ಪ್ರಕ್ರಿಯೆ ಮುಂದುವರಿಯಲಿದೆ. ವ್ಯಾಪಾರ ಹಾಗೂ ಅರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಲು ಎಲ್ಲಾ ಹೆಜ್ಜೆಗಳನ್ನು ಇಡಲಾಗುವುದು' ಎಂದು ಟಿಪ್ಪಣಿಯಲ್ಲಿ ಅವರು ಉಲ್ಲೇಖಿಸಿದ್ದಾರೆ.
'ಈ ವಿಷಯವನ್ನು ಇತ್ತೀಚೆಗೆ ಅಮೆರಿಕ ವಿವಿಧ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದಲ್ಲಿ ಮಾತುಕತೆ ನಡೆಸಲಾಗಿದೆ. ಇದರ ಪರಿಣಾಮಗಳು ದ್ವಿಪಕ್ಷೀಯ ಸಂಬಂಧದ ಮೇಲೆ ಮಾತ್ರವಲ್ಲ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೂ ಬೀರಬಹುದಾದ ಪರಿಣಾಮಗಳನ್ನು ಭಾರತವು ಸ್ಪಷ್ಟವಾಗಿ ಅವರಿಗೆ ತಿಳಿಸಿದೆ' ಎಂದು ಹೇಳಿದೆ.

