ನವದೆಹಲಿ: ಭಾರತವನ್ನು ವಿಶ್ವದ ಮುಂಚೂಣಿ ದೇಶವನ್ನಾಗಿ ಮಾಡಲು 'ಸ್ವದೇಶಿ' ಹಾಗೂ 'ವೋಕಲ್ ಫಾರ್ ಲೋಕಲ್' ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಕರೆ ನೀಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ಅವರು, ಪ್ರವಾಸ ಮತ್ತು ಮೋಜು-ಮಸ್ತಿ, ಸಂಭ್ರಮಾಚರಣೆಗಾಗಿ ವಿದೇಶಗಳಿಗೆ ತೆರಳುವ ಬದಲು ದೇಶೀಯ ಪ್ರವಾಸೋದ್ಯಮ ಮತ್ತು ಸಂಸ್ಕೃತಿಗೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದ್ದಾರೆ.
ವೆಡ್ಡಿಂಗ್ಸ್ ಇನ್ ಇಂಡಿಯಾ: ಬರಿ ಮೋಜು-ಮಸ್ತಿಗಾಗಿ ವಿದೇಶಗಳಿಗೆ ಪ್ರವಾಸ ಬೆಳೆಸುವುದು ಹಾಗೂ ವಿದೇಶಗಳಲ್ಲಿ ವಿವಾಹ ಸಮಾರಂಭಗಳನ್ನು ಏರ್ಪಡಿಸುವುದನ್ನು ಬಿಟ್ಟು, 'ವೆಡ್ಡಿಂಗ್ಸ್ ಇನ್ ಇಂಡಿಯಾ' (ಭಾರತದಲ್ಲೇ ಮದುವೆಯಾಗಿ) ತತ್ವವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದಿದ್ದಾರೆ.
ಚಿನ್ನ ಖರೀದಿಗೆ ಕಡಿವಾಣ: ಅತ್ಯಂತ ಅಗತ್ಯವಿದ್ದಲ್ಲಿ ಮಾತ್ರ ಚಿನ್ನವನ್ನು ಖರೀದಿಸಬೇಕು. ಅನಗತ್ಯವಾಗಿ ಚಿನ್ನದ ಮೇಲೆ ಹೂಡಿಕೆ ಮಾಡುವುದನ್ನು ಅಥವಾ ಖರೀದಿಸುವುದನ್ನು ನಿಯಂತ್ರಿಸಬೇಕೆಂದು ಅವರು ಹೇಳಿದ್ದಾರೆ.
ಆತ್ಮನಿರ್ಭರ ಭಾರತ ಮತ್ತು ವಿಕಸಿತ ಭಾರತ 2047: ನಾವು ಎಷ್ಟು 'ಸ್ವದೇಶಿ' ಹಾಗೂ ಸ್ವಾವಲಂಬನೆಗೆ ಒತ್ತು ನೀಡುತ್ತೇವೆಯೋ, ಅಷ್ಟು ವೇಗವಾಗಿ ದೇಶ ಪ್ರಗತಿ ಹೊಂದಲಿದೆ. ದೇಶದ 100ನೇ ಸ್ವಾತಂತ್ರ್ಯೋತ್ಸವದ ಹೊತ್ತಿಗೆ (2047), ಸುಭದ್ರ ಹಾಗೂ 'ವಿಕಸಿತ ಭಾರತ'ವನ್ನು ಯುವಜನತೆಗೆ ಹಸ್ತಾಂತರಿಸಲಿದ್ದೇವೆ ಎಂಬ ಭರವಸೆ ನನಗಿದೆ ಎಂದಿದ್ದಾರೆ.
140 ಕೋಟಿ ಜನರ ಶಕ್ತಿ: ನಮ್ಮ ನೀತಿಗಳು ಸ್ಪಷ್ಟವಾಗಿವೆ ಹಾಗೂ ಉದ್ದೇಶಗಳು ಪರಿಶುದ್ಧವಾಗಿವೆ. 140 ಕೋಟಿ ಭಾರತೀಯರ ಒಗ್ಗೂಡಿದ ಶಕ್ತಿಯು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ. ಬನ್ನಿ, ನಾವೆಲ್ಲರೂ ದೃಢ ಸಂಕಲ್ಪದೊಂದಿಗೆ ಮುನ್ನಡೆದು ಆ ಸಂಕಲ್ಪವನ್ನು ನನಸು ಮಾಡೋಣ ಎಂದೂ ಅವರು ಪೋಸ್ಟ್‌ನಲ್ಲಿ ಮನವಿ ಮಾಡಿದ್ದಾರೆ.

