ಭೋಪಾಲ್: ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯ ಗರೋಠ್ ಪ್ರದೇಶದಲ್ಲಿ ತನ್ನ ನಾಲ್ವರು ಮಕ್ಕಳನ್ನು ಕೊಂದ 40 ವರ್ಷದ ಮಹಿಳೆಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಮಕ್ಕಳನ್ನು ಬಾವಿಗೆ ತಳ್ಳಿ ಹತ್ಯೆ ಮಾಡಿದ ಆರೋಪದಲ್ಲಿ ಸುಗ್ನಾಬಾಯಿ ಬಂಜಾರಾಗೆ ಗರೋಠ್ನ ಪ್ರಥಮ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ನಿರಂಜನ್ ಕುಮಾರ್ ಪಾಂಚಾಲ್ ಮಂಗಳವಾರ ಈ ಶಿಕ್ಷೆ ಪ್ರಕಟಿಸಿದರು.
ಪಿಪಲ್ಖೇಡಾ ಗ್ರಾಮದ ನಿವಾಸಿ ಸುಗ್ನಾಬಾಯಿ, 2024ರ ಜುಲೈ 13ರಂದು ತನ್ನ ಪತಿ ರೋಡ್ಸಿಂಗ್ ಬಂಜಾರಾ ಜೊತೆ ತೀವ್ರವಾಗಿ ಜಗಳವಾಡಿದ್ದರು. ಮದ್ಯದ ಅಮಲಿನಲ್ಲಿದ್ದ ಪತಿ ಆಕೆಯ ಮೇಲೆ ದೈಹಿಕ ದೌರ್ಜನ್ಯ ಎಸಗಿದ್ದನು. ಇದರಿಂದ ನೊಂದ ಆಕೆ, 2024ರ ಜುಲೈ 14ರಂದು ತಮ್ಮ ಜಮೀನಿನಲ್ಲಿದ್ದ ಬಾವಿಗೆ ಎರಡು ವರ್ಷದ ಕಾರ್ತಿಕ್, ನಾಲ್ಕು ವರ್ಷದ ಮುಸ್ಕಾನ್, ಏಳು ವರ್ಷದ ಅನುಷ್ಕಾ ಮತ್ತು ಒಂಭತ್ತು ವರ್ಷದ ಬಂಟಿ ಸೇರಿದಂತೆ ನಾಲ್ವರು ಮಕ್ಕಳನ್ನು ತಳ್ಳಿದಳು. ನಂತರ ತಾನೂ ಕೂಡ ಅವರ ಹಿಂದೆಯೇ ಬಾವಿಗೆ ಹಾರಿದಳು. ಬಳಿಕ, ಗ್ರಾಮಸ್ಥರು ಸುಗ್ನಾಬಾಯಿಯನ್ನು ರಕ್ಷಿಸಿದರಾದರೂ, ನಾಲ್ವರೂ ಮಕ್ಕಳು ಪ್ರಾಣ ಕಳೆದುಕೊಂಡರು ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ.
ಪ್ರತಿ ಮಗುವಿನ ಸಾವಿಗೆ ಪ್ರತ್ಯೇಕವಾಗಿ ಸುಗ್ನಾಬಾಯಿ ಜೀವಾವಧಿ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಧೀಶ ಪಾಂಚಾಲ್ ಆದೇಶಿಸಿದರು.
ಈ ದಂಪತಿಗೆ ಮದುವೆಯಾಗಿ 17 ವರ್ಷಗಳಾಗಿದ್ದವು. ಪತಿ ರೋಡ್ಸಿಂಗ್ ಆಕೆಗೆ ಕಿರುಕುಳ ನೀಡುತ್ತಿದ್ದುದಲ್ಲದೆ ಮಕ್ಕಳ ಮೇಲೂ ಹಲ್ಲೆ ನಡೆಸುತ್ತಿದ್ದನು ಎನ್ನಲಾಗಿದೆ. 2024ರ ಜುಲೈ 13ರ ರಾತ್ರಿ ಆತ ಕುಟುಂಬದವರ ಮೇಲೆ ಹಲ್ಲೆ ನಡೆಸಿ, ಮಳೆಯಲ್ಲೇ ಮನೆಯಿಂದ ಹೊರಹಾಕಿದ್ದ ಎಂದು ಆರೋಪಿಸಲಾಗಿದೆ. ಆಶ್ರಯ ಹುಡುಕಿಕೊಂಡು ಸುಗ್ನಾಬಾಯಿ ಅಂದು ರಾತ್ರಿ ಮಕ್ಕಳೊಂದಿಗೆ ಅಂಗನವಾಡಿ ಕೇಂದ್ರಕ್ಕೆ ತೆರಳಿದ್ದರು. ಮರುದಿನ ಮುಂಜಾನೆ ಮಕ್ಕಳನ್ನು ಕರೆದುಕೊಂಡು ಹೊಲಕ್ಕೆ ಹೋದ ಆಕೆ, ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಹಾರಿದ್ದಳು.

