ಬೀಡ್ : ಸುಮಾರು 200 ವರ್ಷಗಳ ಬಳಿಕ ದಹಿಫಾಲೆ ಕುಟುಂಬದಲ್ಲಿ ಹೆಣ್ಣುಮಗು ಜನಿಸಿದ್ದು, ನವಜಾತ ಶಿಶುವಿಗೆ ಕುಟುಂಬದ ಸದಸ್ಯರು ಅದ್ದೂರಿ ಸ್ವಾಗತ ನೀಡಿರುವ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪಾರ್ಲಿಯಲ್ಲಿ ನಡೆದಿದೆ.
ದಹಿಫಾಲೆ ಕುಟುಂಬದಲ್ಲಿ ಕಳೆದ ಐದು ತಲೆಮಾರುಗಳಿಂದ ಹೆಣ್ಣುಮಗು ಜನಿಸಿರಲಿಲ್ಲ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಹೀಗಾಗಿ, ನವಜಾತ ಶಿಶು ಗರ್ಗಿ ಮತ್ತು ಆಕೆಯ ತಾಯಿ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಅವರನ್ನು ಮನೆಗೆ ಬರಮಾಡಿಕೊಳ್ಳಲು ಕುಟುಂಬದವರು ವಿಶೇಷ ಸಮಾರಂಭ ಆಯೋಜಿಸಿದ್ದರು.
ಹೂವುಗಳಿಂದ ಅಲಂಕರಿಸಿದ ಸಾರೋಟಿನಲ್ಲಿ ತಾಯಿ ಮತ್ತು ಮಗುವನ್ನು ಕೂರಿಸಿ ಮನೆಯವರೆಗೆ ಮೆರವಣಿಗೆ ನಡೆಸಲಾಯಿತು. ಈ ವೇಳೆ ವಾದ್ಯಗಳನ್ನು ನುಡಿಸಿ ಸಂಭ್ರಮಿಸಲಾಯಿತು. ಕುಟುಂಬದವರು ಗರ್ಗಿಯನ್ನು ರಾಜಕುಮಾರಿಯಂತೆ ನೋಡಿಕೊಳ್ಳುತ್ತಿರುವುದನ್ನು ಕಂಡು ಗ್ರಾಮಸ್ಥರೂ ಸಂಭ್ರಮದಲ್ಲಿ ಪಾಲ್ಗೊಂಡರು.
ಸೌಭಾಗ್ಯವತಿ ಕಲ್ಪನಾ ರಿಷಿಕೇಶ್ ದಹಿಫಾಲೆ ಅವರು ಗರ್ಗಿಗೆ ಜನ್ಮ ನೀಡಿದ್ದಾರೆ. ತಮ್ಮ ಕುಟುಂಬದಲ್ಲಿ ಸುಮಾರು 200 ವರ್ಷಗಳಿಂದ ಹೆಣ್ಣುಮಗು ಜನಿಸಿರಲಿಲ್ಲ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.
ಮೊಮ್ಮಗಳು ಜನಿಸಿದ್ದಕ್ಕೆ ಭಾವುಕರಾದ ಗರ್ಗಿಯ ತಾತ ಲಿಂಬಾಜಿ ದಹಿಫಾಲೆ, "ಮನೆಯಲ್ಲಿ ಹೆಣ್ಣುಮಗು ಇರುವುದು ಶುಭ ಸೂಚನೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸುದೀರ್ಘ ಕಾಲದಿಂದ ನಿರೀಕ್ಷಿಸಲಾಗಿದ್ದ ಈ ಕ್ಷಣವನ್ನು ಆಚರಿಸುವ ಉದ್ದೇಶದಿಂದ ಸಂಭ್ರಮಾಚರಣೆ ನಡೆಸಲಾಗಿದೆ. ಮನೆಯಲ್ಲಿ ಹೆಣ್ಣುಮಗು ಜನಿಸುವುದು ಸಂತೋಷ ಮತ್ತು ಹೆಮ್ಮೆಯ ಸಂಗತಿ. ಇಂತಹ ಸಂದರ್ಭವನ್ನು ಸಂಭ್ರಮದಿಂದ ಆಚರಿಸಬೇಕು ಎಂಬ ಸಕಾರಾತ್ಮಕ ಸಂದೇಶವನ್ನು ಸಮಾಜಕ್ಕೆ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

