ನವದೆಹಲಿ: ಜೈಪುರದ ಎರಡು ಪರೀಕ್ಷಾ ಕೇಂದ್ರಗಳಲ್ಲಿ ತಾಂತ್ರಿಕ ಅಡಚಣೆಯಿಂದ NEET-PG 2026 ಪರೀಕ್ಷೆ ಬರೆಯಲು ಸಾಧ್ಯವಾಗದ 2,445 ಪರೀಕ್ಷಾರ್ಥಿಗಳಿಗೆ ಮರುಪರೀಕ್ಷೆ ನಡೆಸುವ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಬುಧವಾರ ಅರ್ಜಿ ಸಲ್ಲಿಸಲಾಗಿದೆ.
ಮರುಪರೀಕ್ಷೆ ನಡೆಸುವ ನಿರ್ಧಾರವು ನ್ಯಾಯಾಲಯದ ಹಿಂದಿನ ಆದೇಶಕ್ಕೆ ವಿರುದ್ಧವಾಗಿದೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಅವರು ಮನವಿ ಮಾಡಿದರು.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೋಯ್ ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಅರ್ಜಿ ಪ್ರಸ್ತಾಪಿಸಲಾಯಿತು. ಆದರೆ, NEETಗೆ ಸಂಬಂಧಿಸಿದ ಎಲ್ಲ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ನೇತೃತ್ವದ ನಿಗದಿತ ನ್ಯಾಯಪೀಠದ ಮುಂದೆ ಅರ್ಜಿಯನ್ನು ಪ್ರಸ್ತಾಪಿಸುವಂತೆ ವಕೀಲರಿಗೆ ಈ ನ್ಯಾಯಪೀಠ ಸೂಚಿಸಿತು.
'NEETಗೆ ಸಂಬಂಧಿಸಿದ ಎಲ್ಲ ಪ್ರಕರಣಗಳು ನ್ಯಾಯಮೂರ್ತಿ ನರಸಿಂಹ ನೇತೃತ್ವದ ನಿಗದಿತ ನ್ಯಾಯಪೀಠದ ಮುಂದೆ ವಿಚಾರಣೆಯಲ್ಲಿವೆ. ಆ ನ್ಯಾಯಪೀಠದ ಮುಂದೆ ಅರ್ಜಿಯನ್ನು ಪ್ರಸ್ತಾಪಿಸಿ. ಈ ಪ್ರಕರಣಗಳಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿವೆ' ಎಂದು ನ್ಯಾಯಪೀಠ ತಿಳಿಸಿತು.
NEET-PG 2026 ಪರೀಕ್ಷೆಯ ವೇಳೆ ತಾಂತ್ರಿಕ ಅಡಚಣೆಯಿಂದ ತೊಂದರೆಗೀಡಾದ 2,445 ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಡೆಸಲು ರಾಷ್ಟ್ರೀಯ ವೈದ್ಯಕೀಯ ವಿಜ್ಞಾನಗಳ ಪರೀಕ್ಷಾ ಮಂಡಳಿ (NBEMS) ನಿರ್ಧರಿಸಿದೆ.
ಆಗಸ್ಟ್ 30ರಂದು ದೇಶದಾದ್ಯಂತ NEET-PG ಪರೀಕ್ಷೆ ನಡೆದಿತ್ತು. ಒಟ್ಟು 2,65,980 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 2,63,535 ಅಭ್ಯರ್ಥಿಗಳ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿತ್ತು ಎಂದು NBEMSನ ಅಧಿಕೃತ ಪ್ರಕಟನೆಯಲ್ಲಿ ತಿಳಿಸಲಾಗಿದೆ.

