ಶಿಲ್ಲಾಂಗ್: ಮೇಘಾಲಯದ ಪೂರ್ವ ಗಾರೋ ಹಿಲ್ಸ್ ಜಿಲ್ಲೆಯಲ್ಲಿ ರವಿವಾರ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಶಂಕಿತ ಸಶಸ್ತ್ರ ಗುಂಪಿನ ನಾಲ್ವರು ಸದಸ್ಯರು ಹತ್ಯೆಗೀಡಾಗಿದ್ದಾರೆ.
ಮೃತರಿಂದ ಎರಡು ಪಿಸ್ತೂಲ್‌ಗಳು, ಸಜೀವ ಮತ್ತು ಬಳಸಿದ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶಂಕಿತರು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ಲಿ.ನ ಅಧಿಕಾರಿಗಳನ್ನು ಒತ್ತೆಹಣಕ್ಕಾಗಿ ಅಪಹರಿಸಲು ಸೋಂಗ್ಸಾಕ್ ಪಟ್ಟಣದತ್ತ ತೆರಳುತ್ತಿದ್ದರು ಎಂದು ಆರೋಪಿಸಲಾಗಿದೆ.
ಚೆಕ್‌ಪೋಸ್ಟ್‌ನಲ್ಲಿ ವಾಹನವನ್ನು ನಿಲ್ಲಿಸುವಂತೆ ಸೂಚಿಸಿದಾಗ ಅವರು ಪೋಲಿಸ್ ತಂಡದ ಮೇಲೆ ಗುಂಡು ಹಾರಿಸಿದ್ದರು. ಪೊಲೀಸರು ಪ್ರತಿದಾಳಿ ನಡೆಸಿದಾಗ ನಾಲ್ವರು ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆಯೇ ಮೃತಪಟ್ಟಿದ್ದರು ಎಂದು ಈಸ್ಟ್ ಗ್ಯಾರೋ ಹಿಲ್ಸ್ ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಅಲ್ಲಾಸನ್ ಮರಾಕ್, ಸುಸ್ತೋಮ್ ರಾಭಾ, ಕಲಾಂ ಅಲಿ ಮತ್ತು ಬೋಬಿಡುಲ್ ಇಸ್ಲಾಂ ಎಂದು ಗುರುತಿಸಲಾಗಿದೆ.
ಉದ್ಯಮಿಯೋರ್ವರನ್ನು ಗುಂಡಿಟ್ಟು ಹತ್ಯೆಗೈದ ಪ್ರಕರಣದಲ್ಲಿ ಮರಾಕ್ ಭಾಗಿಯಾಗಿದ್ದ. ರಾಭಾ ಮತ್ತು ಅಲಿ ದರೋಡೆ, ಅಪಹರಣ ಮತ್ತು ಸುಲಿಗೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದರು ಎಂದು ಪೋಲಿಸರು ತಿಳಿಸಿದರು.

